News

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಏಪ್ರಿಲ್ 7 ರಂದು ನಿಟ್ಟೂರು ಹನುಮಂತ ನಗರದ ಕೊರಗ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಜನಾಧಿಕಾರಿ ಮಾಲತಿ ದಿನೇಶ್, ವಿಶ್ವ ಆರೋಗ್ಯ ದಿನ ಎಂಬುದು ಒಂದು ದಿನದ ಸಾಂಕೇತಿಕ ಆಚರಣೆ ಆಗದೇ ದಿನನಿತ್ಯದ ಜೀವನದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು ಎಂದು ಹಲವಾರು ಉದಾಹರಣೆಗಳ ಸಹಿತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಬಾಗಿಲು ವಲಯ, ಸ್ಪಂದನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆ ಬ್ರಹ್ಮಾವರ ಹಾಗೂ ಗಾರ್ಡ್ ಸಂಸ್ಥೆ ಬನ್ನಂಜೆ ಇವರ ಸಂಯುಕ್ತ ವಿವರಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ ನಾಯಕ್, ಜಗತ್ತಿನಾದ್ಯಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ಸ್ವಚ್ಛ ಭಾರತ ಮತ್ತು ಸ್ವಸ್ಥ ಭಾರತದ ಪರಿಕಲ್ಪನೆ ಒಂದಕ್ಕೊಂದು ಸಂಪರ್ಕ ಹೊಂದಿದೆ. ಮನುಷ್ಯ ತನಗೆ ತಾನೇ ಮಿತ್ರ ಮತ್ತು ತನಗೆ ತಾನೇ ಶತ್ರುವೂ ಆಗಿದ್ದಾನೆ. ಶಿಸ್ತುಬದ್ಧ ಜೀವನಶೈಲಿ ಬೆಳೆಸಿಕೊಂಡು ದೀರ್ಘಕಾಲದ ವರೆಗೆ ಆರೋಗ್ಯವಂತರಾಗಿ ಜೀವಿಸುವುದೇ ನಿಜವಾದ ಅಭಿವೃದ್ಧಿ ಮತ್ತು ಇದರಿಂದ ದೇಶದ ಜಿಡಿಪಿ ಬೆಳವಣಿಗೆ ಆಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಜನರು ಅತಿಯಾದ ಆಸೆ, ಮತ್ತು ಅಸೂಯೆ ಇವುಗಳಿಂದ ತಮ್ಮ ಮಾನಸಿಕ ಆರೋಗ್ಯ ಹಾಳು ಮಾಡುತ್ತಿದ್ದಾರೆ. ಇರುವ ವಿಷಯದಲ್ಲಿ ತೃಪ್ತಿಯನ್ನು ಕಂಡು ಬಾಳಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಮುಖಿ ಆಗಿ ಬದುಕಿದರೆ ರೋಗ ಮುಕ್ತ ಸಮಾಜದ ಪರಿಕಲ್ಪನೆ ಸಾಕಾರಗೊಳಿಸಬಹುದು ಎಂದು ಉದಾಹರಣೆ ಸಹಿತ ಸ್ಪಷ್ಟಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚ್ಚಿದಾನಂದ, ಮನುಷ್ಯನ ಜೀವನ ಶೈಲಿಯಿಂದ ಬರುವ ಹಲವಾರು ರೋಗಗಳ ಬಗ್ಗೆ ಸವಿವರವಾಗಿ ಪರಿಚಯಿಸಿದರು. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಗೆ ತಾಯಿಯ ಪೋಷಣೆಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಇದರಿಂದಾಗಿ ಮಕ್ಕಳ ಬೆಳವಣಿಗೆಯಲ್ಲಿ ಏರು ಪೇರುಗಳು ಸಂಭವಿಸುತ್ತದೆ. ಪ್ರತಿದಿನ ಬೆಳಗ್ಗೆ ನಿಗದಿತ ಪ್ರಮಾಣದಲ್ಲಿ ವ್ಯಾಯಾಮ, ವಾಯು ವಿಹಾರ ಮಾಡಿದರೆ ಆರೋಗ್ಯವಂತ ಜೀವನ ಶೈಲಿ ರೂಪಿಸಿಕೊಳ್ಳುವ ಮೂಲಕ ರೋಗಗಳಿಂದ ದೂರವಿರಬಹುದು ಎಂದರು.

ಒಕ್ಕೂಟದ ಅಧ್ಯಕ್ಷೆ ಶೀಲಾ ನಾಯಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸ್ವಸಹಾಯ ತರಬೇತಿ ಸಂಸ್ಥೆ ಉಪನ್ಯಾಸಕ ಗುರುಬಸಪ್ಪ ವೀರಾಪೂರ, ಸಮಾಜಕಾರ್ಯ ಉಪನ್ಯಾಸಕಿ ಅಮಿತಾ ಉಪಸ್ಥಿತರಿದ್ದರು. ಒಕ್ಕೂಟದ ರಾಧಾ ಭಾಸ್ಕರ್ ಸ್ವಾಗತಿಸಿದರು, ಸಮಾಜಕಾರ್ಯ ವಿದ್ಯಾರ್ಥಿಗಳಾದ ಸಂತೋಷ್ ನಿರೂಪಿಸಿ, ಸರಿತಾ ವಂದಿಸಿದರು.

 

Leave a Reply

Your email address will not be published. Required fields are marked *