AgricultureStudy Tourssuccess story

ಕರಾವಳಿಯ ಭತ್ತದ ಗದ್ದೆಯಲ್ಲಿ ನಾಟಿ ಯಂತ್ರದ ಸದ್ದು

ಕಳೆದ ಮುಂಗಾರಿನಲ್ಲಿ ಕರಾವಳಿಯ ಭತ್ತದ ಗದ್ದೆಗಳಲ್ಲಿ ಭತ್ತ ನಾಟಿ ಯಂತ್ರದ ಸದ್ದು ಜೋರಾಗಿತ್ತು. ಸಾಮಾನ್ಯ ನಾಟಿ ಪದ್ದತಿಗೆ ಕೂಲಿಯಾಳುಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಭತ್ತ ಕೃಷಿಯನ್ನು ಕೈಬಿಡುವ ಆಲೋಚನೆಯಲ್ಲಿದ್ದ ಹಲವರು ಯಂತ್ರ ನಾಟಿಯ ಅನುಕೂಲ ಇದೆ ಎಂದು ಗೊತ್ತಾದಾಗ ಖುಷಿಯಿಂದ ಕೃಷಿಯಲ್ಲಿ ತೊಡಗಿದ್ದರು. ಕುಮಟಾ ತಾಲೂಕಿನ ಮೊರಳ್ಳಿ ಗ್ರಾಮದ ಶರ್ಮಿಳಾ ಮಾರುತಿ ನಾಯಕರದು ಮೂರು ಎಕರೆ ಜಮೀನು. ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿರುವ ಇವರು ಕಳೆದ ಮುಂಗಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಯಂತ್ರಧಾರೆ ಕೇಂದ್ರದಿಂದ ಭತ್ತ ನಾಟಿ ಯಂತ್ರವನ್ನು ತರಿಸಿಕೊಂಡು ಯಂತ್ರದ ಮೂಲಕ ಭತ್ತ ನಾಟಿ ಮಾಡಿಸಿದ್ದರು. ಗ್ರಾಮಾಭಿವೃದ್ದಿ ಯೋಜನೆ ನೀಡಿದ ಮಾಹಿತಿಯಿಂದ ಸಾಲು ನಾಟಿ ಬೇಸಾಯ ಮಾದರಿ ಅನುಸರಿಸಿ ಉತ್ತಮ ಇಳುವರಿ ಪಡೆದಿದ್ದಾರೆ. ಕುಂದಾಪುರ ತಾಲೂಕಿಗೆ ಅದ್ಯಯನ ಪ್ರವಾಸಕ್ಕೆ ತೆರಳಿದ್ದ ಇವರು ಅಲ್ಲಿ ನಡೆಸುತ್ತಿದ್ದ ಶ್ರೀ ಮಾದರಿಯ ಭತ್ತ ಕೃಷಿಯಿಂದ ಪ್ರೇರಣೆಗೊಂಡು ಎರಡು ಎಕರೆ ಜಮೀನಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಂಟಿಯಾಗಿ ನಡೆಸುತ್ತಿರುವ ಕೃಷಿಯಂತ್ರ ಧಾರೆ ಬಾಡಿಗೆ ಆಧಾರಿತ ಸೇವಾಕೇಂದ್ರದಲ್ಲಿ ದೊರೆಯುವ ಭತ್ತ ನಾಟಿ ಯಂತ್ರವನ್ನು ಬಳಸಿಕೊಂಡಿದ್ದರು.
ಚಾಪೆ ಮಾದರಿಯ ಭತ್ತದ ಸಸಿ ಮಡಿ ತಯಾರಿಸಿ ನಾಟಿಗೆ ಬಳಸಿದ್ದಾರೆ. ಕೂಲಿಯಾಳುಗಳ ಸಮಸ್ಯೆ ಇವರನ್ನು ತೀರ್ವವಾಗಿ ಕಾಡುತ್ತಿತ್ತು. ಕೃಷಿ ಕೂಲಿಯಾಳುಗಳ ಕೊರತೆಯ ಕಾರಣದಿಂದಾಗಿಯೇ ಇವರ ಹೊಲದ ಸುತ್ತ ಮುತ್ತ ಗದ್ದೆಗಳನ್ನು ಪಾಳು ಬಿಟ್ಟು, ಅಡಿಕೆ ತೋಟಗಳಾಗಿ ಮಾರ್ಪಟ್ಟಿರುವ ಅನೇಕ ಉದಾಹರಣೆಗಳು ಇಲ್ಲಿ ಕಂಡುಬರುತ್ತದೆ. ಕುಮಟಾ ತಾಲೂಕಿನ ಹಿರೇಗುತ್ತಿ, ಮಾದನಗೇರಿ, ಮೊರಬಾ, ಬೆಟ್ಕುಳಿ ಭಾಗಗಳಿಂದ ಕೃಷಿ ಕೂಲಿಗಳು ಸಿಗುತ್ತಾರಾದರೂ ಅವರಿಗೆ ಪ್ರತಿ ದಿನದ ಕೂಲಿ 250 ರೂಪಾಯಿ ನೀಡಬೇಕು. ಊಟ, ವಾಹನ ಬಾಡಿಗೆ ಲೆಕ್ಕ ಹಾಕಿದರೆ ರೂಪಾಯಿ ಮುನ್ನೂರು ದಾಟುತ್ತದೆ. ಹಾಗಾಗಿ ಭತ್ತ ಕೃಷಿ ಇವರಿಗೆ ಲಾಭದಾಯಕವಾಗಿರಲಿಲ್ಲ.
‘ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.

Leave a Reply

Your email address will not be published. Required fields are marked *