NewsTechnologyTraining

ಕೌಶಲ್ಯಾಭಿವೃದ್ಧಿ ತರಬೇತಿಯಡಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ತಿ.ನರಸೀಪುರ ತಾಲೂಕು ಮತ್ತು ಕಿಯೋನಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯಡಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ  ಶ್ರೀಮದ್ವಾಟಾಳು ಸೂರ್ಯಸಿಂಹಾಸನ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಹಿಳೆಯರಿಗೆ ಮೊದಲ ಆಧ್ಯತೆ ನೀಡುವುದರೊಂದಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿಯತ್ತ ಕರೆದುಕೊಂಡು ಹೋಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವಾದ ಕಂಪ್ಯೂಟರ್ ತರಬೇತಿಯನ್ನು ಬಡಮಕ್ಕಳಿಗೆ ಕೊಡಿಸುವ ಕೆಲಸವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಇಂದಿನ ವಿದ್ಯಾರ್ಥಿಗಳಾದ ನೀವು ಮುಂದಿನ ಪ್ರಜೆಗಳಾಗುವುದರಿಂದ ಹಾಗೂ ಇಂದಿನ ಯುಗದಲ್ಲಿ ಕಂಪ್ಯೂಟರ್ ಪರಣಿತಿ ಅತ್ಯಗತ್ಯವಾಗಿ ಬೇಕಾಗಿರುವುದರಿಂದ ಕಂಪ್ಯೂಟರ್ ತರಬೇತಿಯನ್ನು ಪಡೆದು ಕೆಲಸಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಂಡು ಉದ್ಯೋಗ ಕಲ್ಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಗಳಾದ ತಿ.ನರಸೀಪುರ.ಕಿಯೋನಿಕ್ಸ್ ತರಬೇತಿ ಸಂಸ್ಥೆಯ ಮುಖ್ಯಸ್ಥರು ಶ್ರೀ ಬಿ.ಎಂ.ಮಹೇಂದ್ರ ಮಾತನಾಡಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನಮ್ಮ ಕಿಯೋನಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ 50 ಜನ ಬಡ ಅಭ್ಯರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿದ್ದು, ಇದರ ಸದುಪಯೋಗ ಪಡಕೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ಕೆಲಸಕ್ಕಾಗಿ ಬಳಕೆ ಮಾಡಿಕೊಳ್ಳಬಹುದು. ಅದಾಗ್ಯೂ ಇನ್ನೂ ಕಲಿಯುವ ಆಸಕ್ತಿ ಇರುವ ವಿಧ್ಯಾರ್ಥಿಗಳು ತರಬೇತಿಯನ್ನು ಮುಂದುವರೆಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ಎಲ್ಲಾ ವಿದ್ಯಾರ್ಥಿಗಳ ಕುರಿತು ಹೇಳಿದರು. ಕಿಯೋನಿಕ್ಸ್ ಸಂಸ್ಥೆಯ ತರಬೇತಿಯ ವಿಷಯಗಳ ಬಗ್ಗೆ ಮತ್ತು ಸಮಯ ಪಾಲನೆ, ಹಾಜರಾತಿ, ಪರೀಕ್ಷೆಯ ತಯಾರಿ, ಕಲಿಕಾ ಆಸಕ್ತಿಗಳ ಬಗ್ಗೆ ತಿಳಿಸುತ್ತಾ ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

ದೂರಸಂಪರ್ಕ, ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಜೀವವಿಮೆ, ಕೋರ್ಟು-ಕಛೇರಿ, ವ್ಯಾಪಾರ, ಕಾರ್ಖಾನೆ, ಚಲನಚಿತ್ರ, ಮನೋರಂಜನೆ, ಸಂಶೋಧನೆ, ಮುದ್ರಣ-ಹೀಗೆ ಕಂಪ್ಯೂಟರ್ ಎಲ್ಲಾ ಕ್ಷೇತ್ರಗಳಲ್ಲೂ ಉಪಯುಕ್ತ ವ್ಯವಹಾರಕ್ಕಾಗಿ ಬಳಕೆಯಾಗುತ್ತವೆ. ಭಾರೀ ಪ್ರಮಾಣದ ಮಾಹಿತಿ ಸಂಗ್ರಹಣೆ ಇವುಗಳ ಇನ್ನೊಂದು ಪ್ರಮುಖ ಉಪಯೋಗ. ಕಂಪ್ಯೂಟರ್‍ನಿಂದ ಸಾಮಾನ್ಯ ಬಳಕೆದಾರನಿಗೆ ಅನೇಕ ಉಪಯೋಗಗಳಿವೆ. ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಠಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಾಕಾರಿ. ಅಂತರ್‍ಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು. ಮತ್ತು ಅಂತರ್‍ಜಾಲದಿಂದ ಪಡೆದ ಮಾಹಿತಿಗಳನ್ನು ಶೇಖರಿಸಿಟ್ಟುಕೊಳ್ಳಬಹುದು. ಆಸಕ್ತಿಯಿಂದ ಕಲಿಯುವವರಿಗೆ ಕಂಪ್ಯೂಟರ್ ಬಳಕೆ ನಿಜಕ್ಕೂ ಅತ್ಯಂತ ಸುಲಭವಿದೆ. ಬಡ ವಿದ್ಯಾರ್ಥಿಗಳು ಹೆಚ್ಚು ಹಣ ನೀಡಿ ಕಂಪ್ಯೂಟರ್ ತರಬೇತಿ ಪಡೆಯುವುದು ಇಂದಿನ ಕಾಲದಲ್ಲಿ ಕಷ್ಟವಿದೆ. ಇದರ ಸಹಜತೆಯನ್ನು ಅರಿತು ಗ್ರಾಮಾಭಿವೃದ್ಧಿಯೋಜನೆ ಮತ್ತು ಕಿಯೋನಿಕ್ಸ್ ಸಂಸ್ಥೆ ಸಹಯೋಗದಿಂದ ನೀವು ತರಬೇತಿ ಪಡಕೊಂಡಿರುವುದು ನಿಜಕ್ಕೂ ಸಂತೋಷದ ವಿಷಯ ಎಲ್ಲಾರು ಈ ಬಗ್ಗೆ ಉತ್ತಮ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಪಡಕೊಳ್ಳುವಂತೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀಯುತ ಪ್ರಭುಸ್ವಾಮಿ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ಮೈಸೂರು ಜಿಲ್ಲೆ ನಿರ್ದೇಶಕರು ಶ್ರೀ ವಿ.ವಿಜಯಕುಮಾರ್ ನಾಗನಾಳರವರು “ಮಕ್ಕಳು ದೇಶದ ಅಮೂಲ್ಯ, ಆಸ್ತಿ. ಪ್ರತಿಯೊಬ್ಬ ಮಗುವನ್ನು ನೇತಾರನನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲಿಯನ್ನಾಗಿಯೂ, ಓರ್ವ ಉತ್ತಮ ಪ್ರಜೆಯನ್ನಾಗಿಯೂ, ಸ್ವಾವಲಂಭಿ ಬದುಕನ್ನು ನಿರ್ವಹಿಸ ಬಲ್ಲ ನಾಗರೀಕನನ್ನಾಗಿಯೂ ರೂಪಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಅದರಲ್ಲಿಯೂ ತಂದೆ ತಾಯಿ ಮತ್ತು ಶಿಕ್ಷಕರ ಜವಾಬ್ದಾರಿ. ಇಂದಿನ ನಮ್ಮ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ತರಬೇತಿಗೆ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿ ತರಬೇತಿ ಪಡಕೊಂಡಿರುವುದು ತುಂಬಾ ಸಂತೋಷದ ವಿಷಯ. ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತಾಗುತ್ತದೆ. ಮಹಿಳೆ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಮಹಿಳೆಯರ ಚಿತ್ರಣವೂ ಇಂದು ಬದಲಾಗಿದೆ. ಸಂಸಾರಕ್ಕೆ ಬೆನ್ನೆಲುಬಾಗಿ ಪುರುಷರ ಜೊತೆ ಸಮಾನವಾಗಿ ಕೂಲಿ ಕೆಲಸ, ಕೃಷಿ ಕೆಲಸ, ಶಿಕ್ಷಣ, ಕಂಪ್ಯೂಟರ್ ಜ್ಞಾನ ಹೊಂದಿದ್ದಾಳೆ. ನೀವು ಹೀಗೆ ಗ್ರಾಮೀಣ ಪ್ರದೇಶದಿಂದ ಬಂದು ಕಂಪ್ಯೂಟರ್ ಜ್ಞಾನ ಪಡೆದು ಉತ್ತಮ ಉದ್ಯೋಗಸ್ಥೆಯಾಗಿ ಬೆಳೆದರೆ ನಮಗೂ ನಮ್ಮ ಸಂಸ್ಥೆಗೂ ಇದೇ ಕೀರ್ತಿ” ಎಂದು ಸಂತೋಷ ವ್ಯಕ್ತಪಡಿಸಿದರು.

ತಿ.ನರಸೀಪುರ ಯೋಜನಾಧಿಕಾರಿ ಶ್ರೀಮತಿ ಸುನೀತಾಪ್ರಭು ಬರುವ ಎಲ್ಲಾ ಅತಿಥಿಗಳನ್ನು ಸ್ವಾಗತಿಸುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಸೀಪುರ ತಾಲೂಕಿಗೆ ಬಂದು 6 ವರ್ಷವಾಗಿದ್ದು, ಅನೇಕ ಸ್ವ ಉದ್ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆದರೆ ಪ್ರಸ್ತುತ ಸಾಲಿನಲ್ಲಿ ನಮ್ಮ ಯೋಜನೆಗೆ ಕಂಪ್ಯೂಟರ್ ತರಬೇತಿಯ ವಿಷಯವಾಗಿ ಪಾಲುದಾರರ ಕುಟುಂಬದವರು ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಯನ್ನು ಪರಿಶೀಲಿಸಿದಾಗ ವಿದ್ಯಾವಂತರಾಗಿ ನಿರುದ್ಯೋಗಿಗಳಾಗಿರುವ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯನ್ನು ಕೊಡಿಸುವ ನಿಟ್ಟಿನಲ್ಲಿ ಇಂದು 50 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಂಪ್ಯೂಟರ್ ಜ್ಞಾನ ನೀಡಲಾಗಿದೆ. ಎಂದು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಗಣ್ಯರ ಮುಖೇನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಸಂದೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *