“ಕೊಳವೆ ಬಾವಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದವು. ಕೃಷಿ ಉಳಿಸಿಕೊಳ್ಳಲು ಖರ್ಚು ಮಾಡುವ ಹಣದ ಬಗ್ಗೆ ಯೋಚಿಸದೆ ಇನ್ನೊಂದು ಕೊಳವೆ ಬಾವಿ ತೋಡುವ ಪ್ರಯತ್ನ ಮಾಡುತ್ತಿದ್ದೆವು. 2017 ರ ಸಾಲಿನಲ್ಲಿ ಅಡಿಕೆ ತೋಟ ಉಳಿಸಿಕೊಳ್ಳುವ ಅವಸರದಲ್ಲಿ ಮೇಲೆಂದ ಮೇಲೆ ಮೂರು ಬೋರ್‍ವೆಲ್ ಕೊರೆಯಿಸಿದ್ದೆವು. ಒಂದರಲ್ಲೂ ನೀರಿನ ಪಸೆಯೂ ಹೊರ ಬಂದಿರಲಿಲ್ಲ. ‘ಗ್ರಾಮದ ಸುತ್ತ ನೂರಾರು ಕೊಳವೆ ಬಾವಿಗಳಾಗಿರುವಾಗ ನೀರೆಲ್ಲಿಂದ ಬರಬೇಕು. ವ್ಯರ್ಥ ಪ್ರಯತ್ನ ಮಾಡಬೇಡಿ’ ಎಂದಿದ್ದರು ಹಲವರು. ಹಾಗಾಗಿಯೇ ಬೋರ್ ವೆಲ್ ಕೊರೆಯಿಸುವುದನ್ನು ಬಿಟ್ಟು ನಾನು ಸದಸ್ಯತ್ವ ಪಡೆದಿದ್ದ ಪ್ರಗತಿ ಬಂಧು ಸಂಘದ ಮೂಲಕ ಕೃಷಿ ಉಳಿಸಿಕೊಳ್ಳುವ ದಾರಿಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಹಿತಿ ಕೇಳಿದ್ದೆ. ನೀರಿಂಗಿಸುವುದೊಂದೇ ಮಾರ್ಗ ಎಂದು ಕೃಷಿ ಮೇಲ್ವಿಚಾರಕ ಮಹಾಬಲೇಶ್ವರ್ ನುಡಿದಿದ್ದರು” ಎನ್ನುತ್ತಾ ತಮ್ಮ ಕಳೆದ ವರ್ಷದ ಬರದ ಹೊಡೆತವನ್ನು ತಪ್ಪಿಸಿಕೊಳ್ಳಲು ಹೆಣಗಾಡಿದ ಕಸರತ್ತನ್ನು ವಿವರಿಸಿದರು ನಾಗರಾಜಪ್ಪ. ಇವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಗರಬನ್ನಿಹಟ್ಟಿ ಗ್ರಾಮದವರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೂಚಿಸಿದ ಮಾಹಿತಿಯನ್ನು ನಾಗರಾಜಪ್ಪ ತಮ್ಮ ಸಂಘದ ಸದಸ್ಯರಲ್ಲಿ ಹೇಳಿಕೊಂಡರು. ಸಂಘದ ಸದಸ್ಯರಿಗೆ ಇದು ಹೊಸತೆನ್ನಿಸಿತು. ‘ಇವರ ಕೃಷಿ ಹೊಂಡ ಉತ್ತಮ ಪರಿಣಾಮ ಒದಗಿಸಿದರೆ ಮುಂದಿನ ವರ್ಷ ನಾವೂ ಒಂದೊಂದು ಹೊಂಡಗಳನ್ನು ರಚಿಸಿಕೊಂಡರಾಯಿತು’ ಚರ್ಚಿಸಿಕೊಂಡು ನಾಗರಾಜಪ್ಪರ ಜೊತೆಗೆ ಹೊಂಡ ತೆಗೆಯುವ ಕೆಲಸದಲ್ಲಿ ಜೊತೆಯಾದರು. ನೋಡ ನೋಡುತ್ತಿದ್ದಂತೆಯೇ ಹದಿನೈದು ಅಡಿ ಉದ್ದ ಅಗಲದ ಕೃಷಿ ಹೊಂಡ ರಚನೆಯಾಯಿತು.
ಕಳೆದ ಬಾರಿಯ ಹಿಂಗಾರಿನಲ್ಲಿ ಉತ್ತಮವಾಗಿ ಸುರಿದ ಮಳೆಯಿಂದಾಗಿ ಕೃಷಿ ಹೊಂಡ ತುಂಬಿಕೊಂಡು ನಿಂತಿತ್ತು. ಅದೆಷ್ಟೋ ಲಕ್ಷ ಲೀಟರ್ ನೀರನ್ನು ಬುಡದಿಂದ ಇಂಗಿಸಿಕೊಂಡಿತ್ತು. ನೀರಿಂಗಿದ ಪರಿಣಾಮ ಗುರುತಿಸಲು ಹೆಚ್ಚೇನೂ ತಡವಾಗಲಿಲ್ಲ. ಇವರ ತೋಟದಲ್ಲಿದ್ದ ನೀರು ಬತ್ತಿಸಿಕೊಂಡ ಬೋರ್ ವೆಲ್ ಮಳೆಗಾಲ ಮುಗಿಯುವುದರ ಒಳಗಾಗಿ ಹಿಂದಿನ ನೀರು ಚಿಮ್ಮಿಸುವ ಸಾಮಥ್ರ್ಯವನ್ನು ಮರಳಿ ಪಡೆದಿತ್ತು. ಈ ವರ್ಷ ಮಳೆಗಾಲದವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಕೃಷಿ ಹೊಂಡ ಉತ್ತಮ ಪರಿಣಾಮ ನೀಡಿದೆ. ಕೃಷಿ ಹೊಂಡದಲ್ಲಿ ನೀರಿಲ್ಲದಿದ್ದಾಗ ಕೃಷಿಗೆ ನೀರುಣಿಸುವ ಉದ್ದೇಶದಿಂದ ಹತ್ತಿರದ ಕೆರೆಯಿಂದ ನೀರು ತುಂಬಿಸಿಕೊಂಡು ಬಂದು ಹೊಂಡದಲ್ಲಿ ಸಂಗ್ರಹಿಸುತ್ತೇವೆ. ಅದೇ ನೀರನ್ನು ಕೃಷಿ ಬೆಳೆಗಳಿಗೆ ಡ್ರಿಪ್ ಮೂಲಕ ನೀರುಣಿಸುತ್ತೇವೆ ಎನ್ನುತ್ತಾರೆ ನಾಗರಾಜ್.