ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಗರಬನ್ನಿಹಟ್ಟಿ ಗ್ರಾಮದ ಗಂಗಾಧರಪ್ಪ ನಾಗಪ್ಪ ಅಮ್ಮಿನಾಳ ಸಾಂಪ್ರದಾಯಿಕ ಕೃಷಿ ತೊರೆದು ಅಡಿಕೆ ತೋಟ ನಿರ್ಮಿಸಿದ್ದರು. ಹಿರಿಯರು ಜೋಳ, ರಾಗಿ ಬೆಳೆದು ಗಳಿಸುತ್ತಿದ್ದ ಭೂಮಿಯಲ್ಲಿ ದೊಡ್ಡ ಗಳಿಕೆಯ ಆಸೆಯಿಂದ ಅಡಿಕೆ ಗಿಡಗಳನ್ನು ತಂದು ನೆಟ್ಟಿದ್ದರು. ಕೊಳವೆ ಬಾವಿ ಕೊರೆಯಿಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದರು. ಹೊಸ ನೆಲದಲ್ಲಿ ಹುಲುಸಾಗಿ ಬೆಳೆದ ಅಡಿಕೆ ಗಿಡಗಳು ನಾಲ್ಕೇ ವರ್ಷಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ ಬೆಂಬಿಡದೇ ಕಾಡಿದ ಬರ ಮಾತ್ರ ಇವರನ್ನು ಹಿಂಡಿ ಹೈರಾಣಾಗಿಸಿತ್ತು. ಕೊಳವೆ ಬಾವಿ ಬತ್ತಿ ಅಡಿಕೆ ಮರಗಳು ಒಣಗತೊಡಗಿದ್ದವು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಬ್ಬಿಸಿದ ತೋಟ. ಇನ್ನು ಕೆಲವೇ ವರ್ಷಗಳಲ್ಲಿ ಫಸಲು ಹೊತ್ತು ನಿಲ್ಲಬೇಕಾದ ಮರಗಳು ಎಲೆ ಒಣಗಿಸಿಕೊಂಡಾಗ ಇವರಿಗಾಗುತ್ತಿದ್ದ ಸಂಕಟ ಅಷ್ಟಿಷ್ಟಲ್ಲ.
ನೀರಿಗಾಗಿ ಏನೂ ತೋಚದಂತಿದ್ದ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀರಿನ ಉಳಿವಿಗಾಗಿ ಕೃಷಿ ಹೊಂಡದ ಕುರಿತು ಮಾಹಿತಿ ನೀಡಿತು. ಮೊದಲೇ ನೀರಿನ ಸಂಕಷ್ಟದಲ್ಲಿದ್ದ ಇವರು ಎಷ್ಟು ಖರ್ಚಾದರೂ ಪರವಾಗಿಲ್ಲ ಭವಿಷ್ಯದಲ್ಲಿಯಾದರೂ ನೀರ ನೆಮ್ಮದಿ ಕಂಡು ಬಂದರೆ ಸಾಕೆಂದು ಹೊಂಡ ರಚನೆಗೆ ಪ್ರಾರಂಭಿಸಿಯೇ ಬಿಟ್ಟರು. ಜೆ.ಸಿ.ಬಿ ಸಹಾಯದಿಂದ ಹತ್ತು ಅಡಿ ಅಳ, ಇಪ್ಪತ್ತು ಅಡಿ ಉದ್ದ ಅಗಲದ ಕೃಷಿಹೊಂಡ ನಿರ್ಮಿಸಿದರು. ಮಳೆಗಾಲದಲ್ಲಿ ನೀರು ಹರಿದು ಬರುವ ಜಾಗಗಳಲ್ಲಿ ಕಾಲುವೆ ತೆಗೆಯಿಸಿ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಿಕೊಟ್ಟರು.
ಮಳೆಗಾಲ ಇನ್ನೂ ಒಂದೆರಡು ತಿಂಗಳು ತಡವಿರುವುದರಿಂದ ಈ ಬಾರಿಗೆ ಅಡಿಕೆ ಮರಗಳನ್ನು ರಕ್ಷಿಸಿಕೊಳ್ಳಲು ಗುಂಡಿಯಲ್ಲಿ ನೀರು ತಂದು ತುಂಬಿಸಿಕೊಳ್ಳಬೇಕು. ತನ್ಮೂಲಕ ಪಂಪಿನ ಸಹಾಯದಿಂದ ನೀರನ್ನೆತ್ತಿ ತೋಟಕ್ಕೆ ಹರಿಸಬೇಕೆಂದು ನಿರ್ಧರಿಸಿ 60 ಅಡಿ ಉದ್ದ ಹಾಗೂ ಅಷ್ಟೇ ಅಗಲದ ಪ್ಲಾಸ್ಟಿಕ್ ರ್ಯಾಪರ್‍ನ್ನು ಗುಂಡಿಗೆ ಹೊದಿಸಿದ್ದರು. ಹದಿನೈದು ಕಿಲೋಮೀಟರ್ ದೂರದ ಕೆರೆಯಿಂದ ಟ್ಯಾಂಕರ್‍ಗಳ ಮೂಲಕ ನೀರು ತರಿಸಿ ಕೃಷಿ ಹೊಂಡ ತುಂಬಿಸಿದರು. ಮೋಟರ್ ಸಹಾಯದಿಂದ ನೀರನ್ನು ಮೇಲಕ್ಕೆತ್ತಿ ತೋಟಕ್ಕೆ ನೀರುಣಿಸಿ ಉಳಿಸಿಕೊಂಡರು.
ಕಳೆದ ವರ್ಷ ಸುರಿದ ಮಳೆಯ ನೀರು ಗುಂಡಿ ಪೂರ್ತಿ ತುಂಬಿಕೊಂಡಿತ್ತು. ಯತೇಚ್ಚ ನೀರು ಭೂಮಿಯಲ್ಲಿ ಇಂಗಿ ಹೋಗಿತ್ತು. ಬತ್ತಿದ ಬೋರ್ ವೆಲ್ ಪುನಃ ನೀರಿನಿಂದ ತುಂಬಿಕೊಂಡು ಗಿಡಗಳಿಗೆ ನೀರುಣಿಸತೊಡಗಿತ್ತು. ಕೃಷಿ ಹೊಂಡದ ಲಾಭ ಕೇವಲ ಒಂದೇ ವರ್ಷದಲ್ಲಿ ಕಂಡುಕೊಂಡ ಖುಷಿ ಗಂಗಾಧರಪ್ಪರಿಗಿದೆ. “ಹೊಂಡದಲ್ಲಿ ನೀರು ನಿಲ್ಲಿಸಿದ ಪರಿಣಾಮ ನನ್ನ ತೋಟ ಉಳಿದುಕೊಂಡಿದೆ” ಎನ್ನುತ್ತಾರೆ ಗಂಗಾಧರಪ್ಪ ಅಮ್ಮಿನಾಳ. ಈ ಬಾರಿ ಮಾರ್ಚ ಕಳೆದರೂ ಬೋರ್ ವೆಲ್ ಬತ್ತಿ ಹೋಗದ ಖುಷಿಯಲ್ಲಿದ್ದಾರೆ. ಕೃಷಿ ಹೊಂಡದ ಅಗತ್ಯವನ್ನು ಸುತ್ತಮುತ್ತಲಿನ ರೈತರಿಗೆ ತಿಳಿಹೇಳುತ್ತಿದ್ದಾರೆ.