ಹಳೇ ಚಂದಾಪುರದ ಸನ್ ಪ್ಯಾಲೇಸ್ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ವಿವಿಧ ಅನುದಾನಗಳ ವಿತರಣೆ ಕಾರ್ಯಕ್ರಮವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
‘ಭೂಮಿಗೆ ಗೊಬ್ಬರ ಹಾಕಿ ಕಷ್ಟಪಟ್ಟು ಬೇಸಾಯ ಮಾಡಿದರೆ ಉತ್ತಮ ಫಸಲು ಬರುತ್ತದೆ. ಶ್ರಮವಹಿಸಿ ತಮ್ಮ ಕರ್ತವ್ಯ ಮಾಡಿದರೆ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ. ನಮ್ಮ ಕೆಲಸದಲ್ಲಿ ದಕ್ಷತೆ, ಪ್ರಾಮಾಣಿಕತೆ, ಶಿಸ್ತು, ಸಮಯಪ್ರಜ್ಞೆ ಇರಬೇಕು. ಭಕ್ತಿಯ ಪಾತ್ರೆ ಶುದ್ಧವಾಗಿದ್ದರೆ ಭಗವಂತನ ಅನುಗ್ರಹ ದೊರೆಯುತ್ತದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.‘ಜನರಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ, ಭವಿಷ್ಯದ ಬಗ್ಗೆ ಅಭಯ ಹಾಗೂ ಭಗವಂತ ನಮ್ಮನ್ನು ಕಾಪಾಡುವನೆಂಬ ನಂಬಿಕೆಯಿಂದ ಸನ್ಮಾರ್ಗದಲ್ಲಿ ನಡೆದರೆ ಯಾವುದೇ ವ್ಯಕ್ತಿ ಸುಖವಾಗಿರುತ್ತಾನೆ. ದೇವರನ್ನು ಮೋಸ ಮಾಡಲು ಸಾಧ್ಯವಿಲ್ಲ. ದೇವರು ಸದಾ ನಮ್ಮೊಂದಿಗೆ ಇರುತ್ತಾನೆ. ಹಾಗಾಗಿ ಕೆಲಸದಲ್ಲಿ ಬದ್ಧತೆಯಿರಬೇಕು. ಸ್ವಸಹಾಯ ಗುಂಪುಗಳ ಸದಸ್ಯರು ಸಂಘದ ಶಿಸ್ತು ಪಾಲಿಸಬೇಕು. ಸಭೆಗಳಿಗೆ ತಪ್ಪದೇ ಹಾಜರಾಗಬೇಕು. ಪಡೆದ ಸಾಲವನ್ನು ಮರುಪಾವತಿ ಮಾಡಬೇಕು. ಅಭಿವೃದ್ಧಿ ಸಾಧಿಸುತ್ತೇವೆ ಎಂಬ ಸಂಕಲ್ಪದಿಂದ ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದರು.
ಶಿಕ್ಷಣ, ಆರೋಗ್ಯ, ಸ್ವಚ್ಛತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧ್ಯೇಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವರ್ಷ ಸಂಸ್ಥೆಯು ರೂ 7ಕೋಟಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಸಾಲ ನೀಡಲು ಮೀನಮೇಷ ಎಣಿಸುತ್ತಿದ್ದ ಬ್ಯಾಂಕ್ಗಳು ಗ್ರಾಮಾಭಿವೃದ್ಧಿ ಸಂಘಗಳಿಗೆ ದೀಪಾಂಜಲಿ ಯೋಜನೆಯಡಿ ರೂ 8 ಸಾವಿರ ಕೋಟಿ ಸಾಲ ನೀಡಿವೆ. ಸಾಲ ಮರುಪಾವತಿ ಸಮರ್ಪಕವಾಗಿ ಮಾಡುತ್ತೀವೆ. ಸಾಲ ಪಡೆದ ಸದಸ್ಯರಿಗೆ ವಿಮಾ ಸೌಲಭ್ಯವಿದ್ದು ರೂ 50ಕೋಟಿ ಹಣ ಸುಭದ್ರತಾ ಯೋಜನೆಯಡಿ ತೊಂದರೆಗೀಡಾದ ಸದಸ್ಯರಿಗೆ ನೀಡಲಾಗಿದೆ’ಎಂದರು.
ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದರು. ಆದರೆ,ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ತಮ್ಮ ಸಾಧನೆ ಹೆಜ್ಜೆ ಗುರುತು ಮೂಡಿಸಿದ್ದಾರೆ. ಸ್ವಸಹಾಯ ಸಂಘ ಎಂದರೆ ತಮ್ಮ ಅಭಿವೃದ್ಧಿಗಾಗಿ ತಾವೇ ರೂಪಿಸಿಕೊಂಡಿರುವ ಸಂಘವಾಗಿದೆ. ಸಂಘ ಹಲವು ಮಕ್ಕಳ ತಾಯಿಯಿದ್ದಂತೆ ತಮ್ಮ ಕಷ್ಟ ಸುಖ ಹಂಚಿಕೊಳ್ಳುವ ವೇದಿಕೆಯಾಗಿದೆ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಮಹಿಳೆಯರ ಸಂಘಟನೆಗೆ ಹಾಗೂ ಬಲವರ್ಧನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕೆಲಸ ಮಾಡುತ್ತಿರುವುದು ಆನೇಕಲ್ ತಾಲ್ಲೂಕಿಗೆ ವರದಾನವಾಗಿದೆ. ಧರ್ಮಸ್ಥಳದ ಬಗ್ಗೆ ಪ್ರತಿಯೊಬ್ಬರಿಗೂ ಒಳ್ಳೆಯ ಭಾವನೆಯಿದೆ. ಶ್ರದ್ಧೆ ಭಕ್ತಿಯಿಂದ ಕೆಲಸಗಳು ಸುಗಮವಾಗಿ ನಡೆಯುತ್ತಿವೆ ಎಂದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಮೂಲ್ ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಶ್ರೆಡ್ಡಿ, ನೆರಳೂರು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ.ನಾಗರಾಜು, ಚಂದಾಪುರ ಪುರಸಭೆಯ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಸುಧಾಕರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನಿರ್ದೇಶಕ ವಸಂತ ಸಾಲಿಯಾನ್, ಯೋಜನಾಧಿಕಾರಿ ಯಶೋದರ ಇದ್ದರು.
https://www.youtube.com/watch?v=CXwMt8mwHwg&feature=youtu.be