AgricultureKrishi Utsavsuccess storyTraining

ತುಂಡು ಭೂಮಿಯಲ್ಲಿ ಹಿಂಡು ಬೆಳೆಯ ಹನುಮಂತಪ್ಪ

ತುಂಡು ಭೂಮಿಯಲ್ಲಿ ಹಿಂಡು ಬೆಳೆ ಎಂದಾಗ ನೆನಪಾಗುವುದು ಬನವಾಸಿಯ ಹನುಮಂತಪ್ಪ ಮಡ್ಲೂರು. ಹಿಂಡು ಹಿಂಡಾಗಿ ತರಾವರಿ ಬೆಳೆಗಳನ್ನು ಸಣ್ಣ ಭೂಮಿಯಲ್ಲಿ ಬೆಳೆದ ಮಾತ್ರಕ್ಕೆ ಇವರು ಪ್ರಸಿದ್ಧಿಯಾದುದಲ್ಲ. ನೀರಾವರಿ ಸೌಕರ್ಯಗಳಿಲ್ಲದೇ ಮಳೆಯಾಶ್ರಿತವಾಗಿ ಎಪ್ಪತ್ತಕ್ಕೂ ಅಧಿಕ ವಿಧದ ಬೆಳೆ ವೈವಿಧ್ಯತೆ ತನ್ನ ಹೊಲದಲ್ಲಿರುವಂತೆ ನೋಡಿಕೊಂಡಿದ್ದರಿಂದ ಹಿಂಡು ಬೆಳೆಯ ಹನುಮಂತಪ್ಪ ಎನ್ನುವ ಹೆಸರು ದಕ್ಕಿದ್ದು. ಬನವಾಸಿಯ ಕೆಪಗೇರಿ ಗ್ರಾಮದವರಾದ ಇವರ ಯಶಸ್ಸಿನ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಮಾಹಿತಿಯ ಬಲವಿದೆ.
2006 ರ ವೇಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬನವಾಸಿಯಲ್ಲಿ ಸ್ವ ಸಹಾಯ ಸಂಘಗಳನ್ನು ರಚಿಸಲು ಆರಂಭಿಸಿದಾಗ ಈ ಬಗ್ಗೆ ಮಾಹಿತಿ ಪಡೆದ ಹನುಮಂತಪ್ಪ ಪ್ರಗತಿಬಂಧು ಸಂಘಕ್ಕೆ ಸೇರ್ಪಡೆಗೊಂಡರು. ಇವರ ಕೃಷಿ ತಾಕು ಭೇಟಿ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕಾರಿಗಳು ಇವರ ಕೃಷಿ ಆಸಕ್ತಿಯನ್ನು ಗಮನಿಸಿ ಹಲವು ಅಪರೂಪದ ಸಸ್ಯ ವೈವಿಧ್ಯತೆಯನ್ನು ತಂದು ಕೊಡುವ ವ್ಯವಸ್ಥೆ ಮಾಡಿದ್ದರು. ಆ ಪ್ರಕಾರ ಯಾವುದೇ ಸ್ಥಳದಲ್ಲಿ ದೇಸೀಯ ಬೀಜಗಳು ಲಭ್ಯವಿದ್ದರೆ ಹನುಮಂತಪ್ಪರ ಗಮನಕ್ಕೆ ತರುತ್ತಿದ್ದರು. ಅಲ್ಲಿಗೆ ಸಕಾಲಕ್ಕೆ ತೆರಳಿ ಬೀಜ ಸಂಗ್ರಹಿಸಿ ತಂದು ತಮ್ಮ ಹೊಲವನ್ನು ಕೃಷಿ ಪ್ರಯೋಗ ಶಾಲೆಯನ್ನಾಗಿಸಿಕೊಂಡರು ಹನುಮಂತಪ್ಪ. ವರ್ಷದಿಂದ ವರ್ಷಕ್ಕೆ ಇವರ ಹೊಲದಲ್ಲಿರುವ ಬೆಳೆಯ ಸಂಖ್ಯೆ ಹೆಚ್ಚಾಗತೊಡಗಿತು.
ಎಪ್ಪತ್ತು ಬಗೆಯ ಬೆಳೆಗಳು:
ಹನುಮಂತಪ್ಪರ ಹೊಲದಲ್ಲಿ ಪ್ರತಿ ವರ್ಷ ಎಪ್ಪತ್ತಕ್ಕೂ ಅಧಿಕ ಬೆಳೆಗಳಿರುತ್ತವೆ. ಮಳೆಯಾಶ್ರಿತ ಕೃಷಿ. ಅಂತರ್ ಬೇಸಾಯಕ್ಕೆ ಒತ್ತು ನೀಡುತ್ತಾರೆ. ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆಯುವ ಪ್ರಕ್ರಿಯೆಯಲ್ಲಿ ನಿರತರಾಗುತ್ತಾರೆ. ಜೂನ್ ಮೊದಲ ವಾರ ಅಥವಾ ಎರಡನೆಯ ವಾರ ಭೂಮಿ ಸಿದ್ದತೆಯ ತರಾತುರಿ ಆರಂಭ. ಮೊದಲ ಮಳೆ ಬಿದ್ದು ಭೂಮಿ ಹದಗೊಂಡರೆ ಸಾಕು ಟ್ರಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಾರೆ. ದೊಡ್ಡ ನೇಗಿಲು, ರೂಟರಿ ಯಾವುದು ಸೂಕ್ತವೋ ಅದರ ಬಳಕೆ. ಹದಗೊಂಡ ಭೂಮಿಯಲ್ಲಿ ಬೀಜ ಬಿತ್ತನೆಗೆ ತಯಾರಾಗುತ್ತಾರೆ.
ಕಾಲೆಕರೆಯಲ್ಲಿ ಊಟದ ಜೋಳ ಬಿತ್ತನೆ. ಬಿತ್ತನೆಗಾಗಿ ಸಾಲು ತೆಗೆಯಲು ಕುಂಟಾಣಿ ಬಳಸುತ್ತಾರೆ. ಹಗ್ಗದ ಸಹಾಯದಿಂದ ಅಳತೆ ತಪ್ಪದಂತೆ ನೋಡಿಕೊಳ್ಳುತ್ತಾರೆ. ಹುಡಿಯಾದ ತಿಪ್ಪೆ ಗೊಬ್ಬರವನ್ನು ಬೀಜ ಬಿತ್ತುವಾಗಲೇ ಸಾಲಿನಲ್ಲಿ ಸೇರಿಸುತ್ತಾರೆ. ಸಡಿಲವಾದ ಗೆರೆ ಸಾಲಿನಲ್ಲಿ ಬಿತ್ತಿದ ಬೇರೆ ಬೇರೆ ಬೀಜಗಳು ಮಣ್ಣಿನೊಳಗೆ ನೀರಿನ ತೇವ ದೊರೆಯುತ್ತಿದ್ದಂತೆ ಮೊಳಕೆಯೊಡೆದು ಬೆಳೆಯಲು ತೊಡಗುತ್ತದೆ. ಇನ್ನೊಂದು ಕಾಲೆಕರೆಯಲ್ಲಿ ಬೆಂಡೆ ಕೃಷಿ. ಬೆಂಡೆಯೊಂದಿಗೆ ಮೂಲಂಗಿ ಬೆಳೆಯುತ್ತಾರೆ. ಮುಳ್ಳು ಸೌತೆ ಕಾಲೆಕರೆಗೆ ಮೀಸಲು. ಮುಳ್ಳು ಸೌತೆಯ ಎಳೆ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ. ಹಾಗಾಗಿ ಎಳೆ ಕಾಯಿಗಳನ್ನೇ ಮಾರಾಟ ಮಾಡುತ್ತಾರೆ. ಮುಳ್ಳು ಸೌತೆ ಬೆಳೆದ ಕಾಲೆಕರೆಯ ಸುತ್ತಲೂ ಬೆಳೆ ಇರುವಂತೆ ನೋಡಿಕೊಳ್ಳುತ್ತಾರೆ. ಒಂದು ಪಾಶ್ರ್ವದಲ್ಲಿ ಹೀರೆ ಬೆಳೆಯುತ್ತಾರೆ. ಇನ್ನೊಂದು ಪಕ್ಕದಲ್ಲಿ ಡಬಲ್ ಬೀನ್ಸ್ ಹಚ್ಚುತ್ತಾರೆ. ಕಾಲೆಕರೆಯ ಪರೀದಿಯೊಳಗೆ ಬರುವ ಇವುಗಳಲ್ಲಿ ಹೀರೆ ಎರಡು ತಿಂಗಳಿಗೆ ಕಟಾವಿಗೆ ಸಿಗುತ್ತದೆ. ಅದೇ ಸಮಯ ಡಬಲ್ ಬೀನ್ಸ್ ಕೂಡ ಕೊಯ್ಲಿಗೆ ಸಿಗುತ್ತದೆ.
ನಾಲ್ಕು ಗುಂಟೆಯಲ್ಲಿ ಟೊಮೆಟೋ ಕೃಷಿ ಮಾಡುತ್ತಾರೆ. ಈ ಸ್ಥಳದಲ್ಲಿ ಬೇರೆ ಬೆಳೆಗೆ ಅವಕಾಶವಿಲ್ಲ. ಗಿಡ ಎರಡು ಮೂರು ಅಡಿ ಬೆಳೆಯುವುದರಿಂದ ಬುಡದಲ್ಲಿ ನೆರಳು ಜಾಸ್ತಿ. ಹೀಗಾಗಿ ಇತರೇ ಗಿಡಗಳನ್ನು ಊರಿದರೆ ಯಾವ ಬೆಳೆಯಿಂದಲೂ ಇಳುವರಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಬೆಳೆಯ ಜಾಣ ನಡೆ ಅನುಸರಿಸುತ್ತಾರೆ. ನಾಲ್ಕು ಗುಂಟೆ ಬದನೆ ಕೃಷಿ. ಮಡಿ ತಯಾರಿಸಿ ಬದನೆ ಸಸಿ ತಯಾರಿಸಿಕೊಳ್ಳುತ್ತಾರೆ. ಇಪ್ಪತ್ತೈದು ದಿನದ ಸಸಿ ನಾಟಿಗೆ ಬಳಸುತ್ತಾರೆ. ಅರವತ್ತು ದಿನಕ್ಕೆ ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಶೇಂಗಾ ಕೃಷಿಗೆಂದು ನಾಲ್ಕು ಗುಂಟೆ ಮೀಸಲಿಡುತ್ತಾರೆ. ಇದರೊಂದಿಗೆ ಹರಿವೆ ಹಾಗೂ ಸಾಸಿವೆ ಬಿತ್ತುತ್ತಾರೆ.
ಹತ್ತಿ ಬೆಳೆಗೆ ಅರ್ಧ ಎಕರೆ ಮೀಸಲು. ಅಂತರ್ ಬೇಸಾಯವಾಗಿ ಚಳಿ ಅವರೆ, ಸಿಡಿ ಅವರೆ, ಔಡಲ, ಕೆಕ್ಕಳಕೆ ಹಣ್ಣು(ಇಬ್ಬಳ ಹಣ್ಣು), ಬಡೆಸೊಪ್ಪು ಬೀಜಗಳನ್ನು ಬಿತ್ತುತ್ತಾರೆ. ಅಲ್ಲಲ್ಲಿ ಶೇಂಗಾ ಹಾಕುವುದೂ ಇದೆ. ಹತ್ತಿ ಮಧ್ಯೆ ಕಲ್ಲಂಗಡಿ ಹಾಕುವುದೂ ಇದೆ. ಮಾರುಕಟ್ಟೆಯಲ್ಲಿ ಉತ್ತಮ ದರ ಲಭ್ಯವಾಗಬಹುದು ಎನ್ನಿಸಿದರೆ ಬಿತ್ತನೆ ಮಾಡುತ್ತಾರೆ. ಒಂದು ಎಕರೆಯಲ್ಲಿ ಮೆಕ್ಕೆ ಜೋಳ ಕೃಷಿ ಮಾಡುತ್ತಾರೆ. ಅಂತರ ಬೇಸಾಯವಾಗಿ ಚೆನ್ನಿಗುಂಬಳ, ಮುಳ್ಳುಸೌತೆ, ಜವಾರಿ ಮುಳ್ಳುಸೌತೆ ಬಿತ್ತುತ್ತಾರೆ. ಮೊದಲಿಗೆ ಕಟಾವಿಗೆ ಸಿಗುವುದು ಜೋಳ. ಮೂರುವರೆ ತಿಂಗಳಿಗೆ ಕಟಾವಾಗಿರುತ್ತದೆ. ಜೋಳದ ಕಟಾವು ಮುಗಿಸುತ್ತಿದ್ದಂತೆ ಚಿನ್ನಿಗುಂಬಳ, ಸೌತೆ ಕೊಯ್ಲಿಗೆ ತಯಾರಿರುತ್ತದೆ. ಸೂರ್ಯಕಾಂತಿಯನ್ನು ಎರಡು ಗುಂಟೆ ಸ್ಥಳದಲ್ಲಿ ಬೆಳೆಯುತ್ತಾರೆ. ಈ ಬೆಳೆಯ ಮದ್ಯೆ ಉದ್ದು ಬಿತ್ತುತ್ತಾರೆ. ಎರಡು ಗುಂಟೆಯಲ್ಲಿ ಬಿತ್ತಿದ ಇವೆರಡೂ ಮೂರು ತಿಂಗಳಲ್ಲಿ ಕಟಾವಿಗೆ ಸಿಗುತ್ತದೆ.
ಬಿಳಿ ಜೋಳ ಕೃಷಿ ಐದು ಗುಂಟೆಯಲ್ಲಿ ಮಾಡುತ್ತಾರೆ. ಅಂತರ್ ಬೇಸಾಯವಾಗಿ ತೊಗರಿ ಬಿತ್ತುತ್ತಾರೆ. ಜೋಳದ ಹೊಲದ ಸುತ್ತಲೂ ಹುಚ್ಚೆಳ್ಳು, ಕರಿ ಎಳ್ಳು, ಬಿಳಿ ಎಳ್ಳು, ಕೆಂಪೆಳ್ಳು, ಅಂಗಿಕಸೆ, ಮೀಟರ್ ಅಲಸಂದೆ, ಹಾಗಲ, ಚೌಳಿ, ಅಲಸಂದೆ ಬಿತ್ತನೆ ಮಾಡುತ್ತಾರೆ. ಉಳಿದಂತೆ ಬಟಾಣಿ, ಸೋಯಾಬಿನ್, ಉದ್ದು, ಹೆಸರು, ಶುಂಠಿ, ಅರಿಶಿನ, ಅಂಬೆಕೊಂಬು, ಆಲೂಗಡ್ಡೆ, ಕಡ್ಡಿ ಮೆಣಸು, ಬ್ಯಾಡಿಗೆ ದಪ್ಪ ಮೆಣಸು, ದೊಣ್ಣೆ ಮೆಣಸು, ನೀರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ಬೆಳೆಯುತ್ತಾರೆ. ನಾಲ್ಕು ಗುಂಟೆಯಲ್ಲಿ ಭತ್ತ ಕೃಷಿ. ಹದಿನೈದು ಗುಂಟೆಯಲ್ಲಿ ರಾಗಿ ಕೃಷಿ ಮಾಡುತ್ತಾರೆ. ಊದಲು, ಹಾರಕ ,ಕೊರಲೆ, ಸಾಮೆ, ಬರಗು ಮುಂತಾದ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.
ಬಹು ಬೆಳೆಯ ಹನುಮಂತಪ್ಪ ಈಗ ಹಿಂಡು ಬೆಳೆಯಲ್ಲಿ ಪ್ರಸಿದ್ದಿ ಪಡೆದ ವಿಷಯದ ಮಾಹಿತಿ ರಾಜ್ಯ ಪೂರ್ತಿ ಪಸರಿಸಿದೆ. ಹಾಗಾಗಿ ಕುತೂಹಲದಿಂದ ಕೃಷಿ ತಂತ್ರ ಅರಿಯಲು ನೂರಾರು ರೈತರು ಇವರ ಹೊಲವನ್ನು ಸಂದರ್ಶನ ಮಾಡುತ್ತಾರೆ. ಕೃಷಿ ತಾಕು ಅಧ್ಯಯನಕ್ಕೆ ಅನುಕೂಲವಾಗಲೆಂದು ಹೊಲದ ಮಧ್ಯೆ ಒಂದುವರೆ ಅಡಿ ಅಗಲದ ಕಾಲು ದಾರಿ ಮಾಡಿದ್ದಾರೆ. ಈ ದಾರಿಯ ಇಕ್ಕೆಲಗಳಲ್ಲಿ ಹೂ ಗಿಡಗಳನ್ನು ಬೆಳೆದಿದ್ದಾರೆ.
280 ಬಗೆಯ ಡೇರೆ ಹೂವಿನ ಗಿಡಗಳು ಇವರಲ್ಲಿದೆ. ಮೂವತ್ತು ಬಣ್ಣದ ಹೂವುಗಳು ಕಾಲು ದಾರಿಯ ಇಕ್ಕೆಲಗಳಲ್ಲಿ ಅರಳಿ ನಿಲ್ಲುತ್ತವೆ. ಗುಲಾಬಿ ಹೂವಿನಲ್ಲಿಯೇ ಹತ್ತು ಬಗೆಯ ತಳಿ ವೈವಿಧ್ಯತೆ ಇವರಲ್ಲಿದೆ. ಅರ್ಧ ಗುಂಟೆಯಲ್ಲಿ ಸುಗಂಧರಾಜ ಕೃಷಿಯಿದೆ. ಉಳಿದಂತೆ ಕನಕಾಂಬರ, ಮಲ್ಲಿಗೆ ಹೂವುಗಳೂ ಅಲ್ಲಲ್ಲಿ ತನ್ನ ಸೌಂದರ್ಯದಿಂದ ನೋಡುಗರನ್ನು ಆಕರ್ಷಣೆಗೊಳಿಸುತ್ತದೆ.
ವರ್ತಕರೂ ಇವರೇ:
ಸಾಮಾನ್ಯವಾಗಿ ರೈತರು ಬೆಳೆದ ಫಸಲಿಗೆ ವರ್ತಕರು ಬೆಲೆ ಕಟ್ಟುತ್ತಾರೆ. ಆದರೆ ಹನುಮಂತಪ್ಪ ತಮ್ಮ ಹೊಲದಲ್ಲಿ ಬೆಳೆದ ಬೆಳೆಗೆ ತಾವೇ ಬೆಲೆ ಕಟ್ಟುತ್ತಾರೆ. ಬೆಳೆದ ತರಕಾರಿಗಳು, ಧಾನ್ಯಗಳು, ಹೂವುಗಳು ಹೀಗೆ ಏನೇ ಬೆಳೆದಿದ್ದರೂ ಅವುಗಳನ್ನು ತಾವೇ ಸ್ವತಃ ಮಾರಾಟ ಮಾಡುತ್ತಾರೆ. ಸುತ್ತಮುತ್ತಲು ನಡೆಯುವ ಸಂತೆಗಳಲ್ಲಿ ವಿಕ್ರಯಿಸುತ್ತಾರೆ. ಕೃಷಿಯಲ್ಲಿ ಸೋಲದಿರುವ ನಿರ್ಧಾರ ತಳೆಯುವವರು ತಾವು ಬೆಳೆದ ಬೆಳೆಯನ್ನು ಸಂತೆಯಲ್ಲಿ ಕುಳಿತು ಮಾರಲು ನಾಚಲೇ ಬಾರದು ಎನ್ನುವ ದೃಢ ನುಡಿ ಇವರದು.
ಪ್ರಶಸ್ತಿಗಳು:
ಅನೇಕ ಕೃಷಿ ಪ್ರಶಸ್ತಿಗಳು ಹನುಮಂತಪ್ಪರಿಗೆ ಒಲಿದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳದ ಭಜಗೋಳಿಯಲ್ಲಿ ನಡೆಸಿದ ಕೃಷಿ ಮೇಳದಲ್ಲಿ ಕೃಷಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ನೀಡಿ ಶುಭ ಹಾರೈಸಿದ ನೆನಪು ಇವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಮುದ್ರಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಕರು, ಕೃಷಿ ವಿಶ್ವ ವಿಧ್ಯಾನಿಲಯದ ವಿಧ್ಯಾರ್ಥಿಗಳು, ಕೃಷಿ ಆಸಕ್ತರು, ಅಭಿಮಾನಿಗಳು ಇವರ ಹೊಲವನ್ನು ಸಂದರ್ಶಿಸಿ ತಮಗಿರುವ ಕುತೂಹಲವನ್ನು ತಣಿಸಿಕೊಳ್ಳುವುದು ಸರ್ವೇ ಸಾಮಾನ್ಯ.
ಅನೇಕ ಗಣ್ಯರೂ ಇವರ ಹೊಲವನ್ನು ಸಂದರ್ಶಿಸಿದ್ದಾರೆ. ಇವರು ಬೆಳೆದ ಸಿರಿಧಾನ್ಯ ಕೃಷಿಯನ್ನು ವೀಕ್ಷಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್ ಮಂಜುನಾಥ್ ಅವರು ಕೃಷಿ ತಾಕು ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ.

One thought on “ತುಂಡು ಭೂಮಿಯಲ್ಲಿ ಹಿಂಡು ಬೆಳೆಯ ಹನುಮಂತಪ್ಪ

Leave a Reply

Your email address will not be published. Required fields are marked *