ತಾನು ಸಂಪಾದಿಸಿದ ಸಂಪಾದನೆಯಲ್ಲಿ ಸ್ಪಲ್ಪ ಭಾಗವನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಅರ್ಪಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದೇ ಪುಣ್ಯದ ಕೆಲಸ ಎಂದು ಇದನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ ಫಲವಾಗಿ ಇಂದು ಘನವೆತ್ತ ಕರ್ನಾಟಕ ಸರ್ಕಾರದಿಂದ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಹೆಚ್.ವಿ ರಾಜೀವ್ರವರು ನಿಜವಾಗಿಯೂ ಅಭಿನಂದನಾ ಅರ್ಹರು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಪಿ ಗಂಗಾಧರ ರೈರವರು ತಿಳಿಸಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಮೈಸೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮೈಸೂರು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಮ್ಯೂನಿಟಿ ಹಾಲ್ನಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಹೆಚ್.ವಿ ರಾಜೀವ್ರವರನ್ನು ಅಭಿನಂದಿಸಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಗ್ರಾಮಾಭಿವೃದ್ಧಿ ಯೋಜನೆಯು ಮೈಸೂರು ತಾಲೂಕಿನಲ್ಲಿ ನಡೆಸುತ್ತಿರುವ ಗ್ರಾಮಾಭಿವೃದ್ಧಿ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ರಾಜೀವ್ ಸ್ನೇಹ ಬಳಗದ ಮೂಲಕ ಸಂಪೂರ್ಣ ಸಹಕಾರವನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಮಾತ್ರವಲ್ಲದೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು ಸ್ವಚ್ಚ ಭಾರತ ಅಭಿಯಾನವನ್ನು ಹಮ್ಮಿಕೊಂಡು ರಾಜೀವ್ ಸ್ನೇಹ ಬಳಗದ ಮೂಲಕ ಸುಮಾರು 350ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಡೆಸಿ ಸ್ವಚ್ಚ ಮೈಸೂರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಸಾಂಸ್ಕøತಿಕ ನಗರಿಯಾಗಿರುವ ಮೈಸೂರಿನ ಪರಿಸರ ರಕ್ಷಣೆಗಾಗಿ “ಭೂಮಿ ತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ” ಎಂಬ ಸಂಕಲ್ಪದೊಂದಿಗೆ ಲಕ್ಷ-ವೃಕ್ಷಗಳನ್ನು ಬೆಳೆಸಿ ಮೈಸೂರು ನಗರವನ್ನು ಹಸಿರಾಗಿಸಲು ಜನಾಂದೋಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಮೈಸೂರಿನ ಪ್ರತಿಯೊಬ್ಬ ನಾಗರೀಕರೂ ಒಂದು ಗಿಡವನ್ನು ನಾಟಿ ಮಾಡುವುದಕ್ಕಾಗಿ ಉಚಿತವಾಗಿ ತಮ್ಮ ನರ್ಸರಿಯಿಂದಲೇ ಗಿಡವನ್ನು ಒದಗಿಸಿಕೊಡುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯಾವ್ಯದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜದ ಒಳಿತಿಗಾಗಿ ಅಭಿವೃದ್ಧಿ ಅಹರ್ನಿಶಿ ಶ್ರಮಿಸಿರುವುದನ್ನು ಹಾಗೂ ತಮ್ಮ ಪ್ರಾಮಾಣಿಕವಾದ ಸೇವೆಯನ್ನು ಕರ್ನಾಟಕ ಸರ್ಕಾರ ಗುರುತಿಸಿ “66ನೇ ಅಖಿಲ ಭಾರತ ಸಹಕಾರ ಸಪ್ತಾಹ” ಆಚರಣೆ ಸಂದರ್ಭದಲ್ಲಿ ರಾಜ್ಯಮಟ್ಟದ “ಸಹಕಾರ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಮೈಸೂರು ಜನತೆಗೆ ಸಂತೋಷವನ್ನು ತಂದಿದೆ. ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ನಿಮ್ಮ ನಿರಂತರ ಸೇವೆ ಎಲ್ಲರಿಗೂ ಪ್ರೇರಣೆಯಾಗಲಿ ಎಂಬ ಸದುದ್ದೇಶ ನಮ್ಮದಾಗಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿ. ವಿಜಯ್ ಕುಮಾರ್ ನಾಗನಾಳರವರು ನುಡಿದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ್ ಮಾಜಿ ಮಹಾಪೌರರು, ಸೋಮಶೇಖರ್. ಎಂ.ಕೆ ಮಾಜಿ ಶಾಸಕರು, ಗೌರಮ್ಮ. ಎಸ್ ಉಪಾಧ್ಯಕ್ಷರು, ಜಿ.ಪಂ, ಮೈಸೂರು. ಹಂದನಹಳ್ಳಿ ಎಸ್.ಸೋಮಶೇಖರ್, ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ ಮೈಸೂರು, ಪ್ರೋ|| ಸಾಯಿನಾಥ್ ಮಲ್ಲಿಗೆಮಾಡು. ಪ್ರಾಂಶುಪಾಲರು. ಎಂ.ಎಂ.ಕೆ-ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯ, ಮೈಸೂರು, ಸುನಂದಾ ಪಾಲನೇತ್ರ, ಲಕ್ಷ್ಮಿ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಆನಂದ್.ಕೆ, ಚಂದ್ರಶೇಖರ್ ಯು.ಎನ್, ಮೇಲ್ವಿಚಾರಕರಾದ ನಾಗಭೂಷಣ್ ಪೈ ಮತ್ತು ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.