Community HealthNews

ವಿಶೇಷಚೇತನರಿಗೆ ಸಲಕರಣೆಗಳ ವಿತರಣೆ

ಲಿಂಗಸಗೂರು ತಾಲ್ಲೂಕಿನ ಅಸ್ಕಿಹಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಹಾರ ಧಾನ್ಯಗಳ ಕಿಟ್ ಮತ್ತು ಅಶಕ್ತರಿಗೆ ಉಚಿತ ಸಲಕರಣೆಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಅಸ್ಕಿಹಾಳ ಮತ್ತು ಸುತ್ತಲಿನ ಪರಿಸರದ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೈನಂದಿನ ದಿನಬಳಕೆ ಆಹಾರ ಧಾನ್ಯಗಳ ವಿಶೇಷ ಕಿಟ್ ನ್ನು ಮತ್ತು ಅಶಕ್ತರಿಗೆ ಮತ್ತು ವಿಶೇಷ ಚೇತನರಿಗೆ ಸಲಕರಣೆಗಳನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಸಂತೋಷ್ ಕುಮಾರ್ ರವರು ವಿತರಿಸಿದರು.
ಸಲಕರಣೆಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು “ಯೋಜನೆಯ ಅಧ್ಯಕ್ಷರಾದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕೋವಿಡ್ -19 ಚಿಕಿತ್ಸೆಗಳಿಗಾಗಿ ರೂ.5 ಕೋಟಿ ಮೊತ್ತವನ್ನು ಪಿ.ಎಂ ಕೇರ್ ನಿಧಿಗೆ ನೀಡಿದ್ದಾರೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಧೆ, ಬೀದಿ ಬದಿಯ ಪ್ರಾಣಿಗಳಿಗೆ ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಗಳು ಆಹಾರ ಒದಗಣೆ ಮಾಡಿದ್ದಾರೆ. ರಾಜ್ಯದ 4315 ಗ್ರಾಮಗಳಲ್ಲಿ 8714 ಕುಟುಂಬಗಳಿಗೆ ರೂ.68 ಲಕ್ಷ ಮೊತ್ತದ ಮಾಶಾಸನ ಮಂಜೂರು ಮಾಡಲಾಗಿದೆ. ಇದರಂತೆ ರಾಯಚೂರು ಜಿಲ್ಲೆಯಲ್ಲಿಯೂ 174 ಕುಟುಂಬಗಳಿಗೆ ರೂ.1.35 ಲಕ್ಷ ಮಾಶಾಸನ ನೀಡಲಾಗಿದೆ. ಯೋಜನೆಯ ಅರ್ಹ ಸಂಘದ ಸದಸ್ಯರಿಗೆ ತುರ್ತು ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ತಮ್ಮ ವ್ಯವಹಾರಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು ಕೋವಿಡ್ ಪರಿಹಾರ ತುರ್ತು ಸಾಲ ಯೋಜನೆಯನ್ನು ರೂಪಿಸಲಾಗಿದ್ದು ಇದರಂತೆ ಸಂಘದ ಸದಸ್ಯರಿಗೆ ಕನಿಷ್ಟ ರೂ.1,000/- ದಿಂದ ಗರಿಷ್ಟ ರೂ.25,000/- ದ ವರೆಗೆ ಸಾಲ ಒದಗಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ರಾಯಚೂರು ಜಿಲ್ಲೆಯ 578 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ನೀಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಆಯ್ದ 58 ಜನ ಅಶಕ್ತ ಮತ್ತು ವಿಶೇಷ ಚೇತನರಿಗೆ ವೀಲ್ ಚೇರ್ ವಾಕರ್ ,ವಾಕಿಂಗ್ ಸ್ಟಿಕ್, ವಾಟರ್ ಬೆಡ್ ಮುಂತಾದ ಸಲಕರಣೆಗಳನ್ನೂ ಯೋಜನೆಯಿಂದ ಉಚಿತವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಇದೇ ಸಂದರ್ಭ ಕೊರೋನಾ ಹರಡುವುದನ್ನು ತಡೆಯಲು ಸರಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಿ ಕೊರೋನಾವನ್ನು ಹರಡದಂತೆ ತಡೆಯಲು ಎಲ್ಲರೂ ಕಂಕಣಬದ್ಧರಾಗಬೇಕೆಂದು ವಿನಂತಿಸಿಕೊಂಡರು.
ಯೋಜನಾಧಿಕಾರಿಗಳಾದ ರಘಪತಿ ಜಿ, ಮೇಲ್ವಿಚಾರಕ ನಾಗರಾಜ್ ಸೇವಾಪ್ರತಿನಿಧಿಗಳಾದ ಜಯಮ್ಮ, ಲಕ್ಷ್ಮೀ, ತರಬೇತಿ ಸಹಾಯಕಿ ಗುಂಡಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.

ವರದಿ: ಹನುಮಂತ ನಾಯ್ಕ್

Leave a Reply

Your email address will not be published. Required fields are marked *