success storyWomen Empowerment

ಮೊಂಬತ್ತಿಯಿಂದ ಬೆಳಗಿದ ‘ಪ್ರಭಾ’

ಇನ್ನೀಗ ಮಳೆಗಾಲದ ಸಮಯ. ಯಾವುದೋ ತುರ್ತು ಕೆಲಸ ಮಾಡುತ್ತಿರುತ್ತೇವೆ. ಹಠಾತ್ತನೆ ವಿದ್ಯುತ್ ಕೈಕೊಡುತ್ತದೆ. ಆ ಗಾಢ ಕತ್ತಲೆಯಲ್ಲಿ ಚಿಮಣಿ ದೀಪಗಳು ಮರೆಯಾಗಿರುವ ಈ ದಿನಮಾನಗಳಲ್ಲಿ ತಕ್ಷಣ ನಮಗೆ ನೆನಪಿಗೆ ಬರುವುದು ಮೇಣದ ಬತ್ತಿ. ಮೊಂಬತ್ತಿ ಹೆಚ್ಚಿನ ಜನರಿಗೆ ಹತ್ತಿರದ ಬಂಧು ಎಂದರೆ ತಪ್ಪಲ್ಲ.
ಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಸ್ವಂತದ್ದಾದ ಕಿರಾಣಿ, ಜೆರಾಕ್ಸ್ ಅಂಗಡಿ, ಹಿಟ್ಟು ತಯಾರಿಸಿಕೊಡುವ ಉದ್ಯೋಗ, ಬಟ್ಟೆಗಳನ್ನು ಹೊಲಿಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ.

ತಯಾರಿಯ ಕಲೆ : ಪದವಿ ಶಿಕ್ಷಣವನ್ನು ಪಡೆದಿರುವ ಪ್ರಭಾ ಬತ್ತಿ ತಯಾರಿ ಬಗ್ಗೆ ಹತ್ತಿರದ ಸಂಬಂಧಿಯೊಬ್ಬರಿಂದ ಎರಡು ದಿನಗಳ ತರಬೇತಿಯನ್ನು ಪಡೆದಿದ್ದಾರೆ. ಮೇಣದ ಬತ್ತಿ ತಯಾರಿಕೆಗೆ ಮುಖ್ಯವಾಗಿ ಬೇಕಾಗಿರುವ ಕಚ್ಚಾ ವಸ್ತು ಮೇಣ ಹಾಗೂ ಬತ್ತಿ. ಇವು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವರು ಈ ಮೇಣವನ್ನು ರಖಂ ದರದಲ್ಲಿ ಅಂಗಡಿಯಿಂದ ತರುತ್ತಾರೆ.

ತಯಾರಿ ಹೀಗೆ : ಒಲೆಯ ಮೇಲೆ ಮೊದಲು ದೊಡ್ಡ ಪಾತ್ರೆಯನ್ನಿಟ್ಟು ಅದರಲ್ಲಿ ಮೇಣವನ್ನು ಕರಗಿಸುತ್ತಾರೆ. ನಂತರ ಮೊಂಬತ್ತಿ ತಯಾರಿಗೆಂದೆ ಇರುವ ಅಚ್ಚಿನಲ್ಲಿ ಬತ್ತಿ ಹಾಗೂ ಮೇಣವನ್ನಿಟ್ಟು ಒತ್ತುತ್ತಾರೆ.

ತಿಂಗಳಿಗೆ ಎರಡೂವರೆ ಸಾವಿರದಿಂದ ಮೂರು ಸಾವಿರ ಮೇಣದ ಬತ್ತಿಗಳನ್ನು ತಯಾರಿಸುತ್ತಾರೆ. ಯಾವುದೇ ಕೆಲಸದಾಳುಗಳನ್ನು ಬಳಸಿಕೊಳ್ಳದೆ ಸ್ವಂತವಾಗಿ ದುಡಿಯುವುದು ಇಲ್ಲಿ ಉಲ್ಲೇಖನೀಯ. ಒಂದು ಕ್ಯಾಂಡಲ್ ತಯಾರಿಗೆ ಇವರಿಗೆ ಖರ್ಚಾಗುವುದು ಸರಾಸರಿ ಐದು ರೂಪಾಯಿ. ತಯಾರಿಸಿದ ಕ್ಯಾಂಡಲ್‍ಗಳನ್ನು ಇವರು ಒಂದು ಕ್ಯಾಂಡಲ್‍ಗೆ ಹತ್ತು ರೂಪಾಯಿಯಂತೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. “ಸ್ಥಳೀಯವಾಗಿ ಬೇರೆ ಯಾರೂ ಈ ಉದ್ಯೋಗವನ್ನು ಕೈಗೊಂಡಿಲ್ಲವಾದ್ದರಿಂದ ಹೆಚ್ಚು ಬೇಡಿಕೆಯಿದೆ. ಎಷ್ಟು ಮೇಣದಬತ್ತಿಗಳಿದ್ದರೂ ವ್ಯಾಪಾರಿಗಳು ಖರೀದಿಸುತ್ತಾರೆ” ಎನ್ನುತ್ತಾರೆ ಪ್ರಭಾ.

ಇವರು ಇದುವರೆಗೆ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯದಲ್ಲಿ ಬ್ಯಾಂಕಿನಿಂದ ಆರು ಲಕ್ಷ ರೂಪಾಯಿವರೆಗೆ ಆರ್ಥಿಕ ಸಹಕಾರವನ್ನು ಪಡೆದಿದ್ದು ಅಂಗಡಿ, ಮೇಣದಬತ್ತಿ ಹಾಗೂ ಹೊಲಿಗೆಯ ಕೆಲಸಗಳಲ್ಲಿ ಅದನ್ನು ವಿನಿಯೋಗಿಸಿದ್ದಾರೆ.

ವೈಭವಲಕ್ಷ್ಮೀ ಸ್ವಸಹಾಯ ಸಂಘದ ಸದಸ್ಯರಾಗಿರುವ ಇವರು ಹೊಲಿಗೆ ಕೆಲಸದಲ್ಲೂ ಪ್ರವೀಣೆ. ಇವರಲ್ಲಿ ನಾಲ್ಕು ಹೊಲಿಗೆ ಯಂತ್ರಗಳಿದ್ದು ಪ್ರತಿ ದಿನ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ತರಗತಿಗಳನ್ನು ನಡೆಸುತ್ತಿದ್ದಾರೆ. ಸದ್ಯ ಐದು ಮಂದಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಒಂದು ಬಾರಿಗೆ ನಾಲ್ಕು ಕೆ.ಜಿ. ಹಿಟ್ಟು ತಯಾರಿಸಬಲ್ಲ ಹದಿನಾಲ್ಕು ಸಾವಿರ ರೂಪಾಯಿ ವೆಚ್ಚದ ಯಂತ್ರವನ್ನು ಖರೀದಿಸಿದ್ದು ಕಡಲೆ ಬೇಳೆ, ಜೋಳ, ಮೆಂತೆ ಮುಂತಾದ ಹಿಟ್ಟನ್ನು ಮಾಡಿಕೊಡುತ್ತಾರೆ. ಈ ಉದ್ಯಮವು ಕೈಹಿಡಿದಿರುವ ಪರಿಣಾಮ ಒಂದು ಲಕ್ಷ ರೂಪಾಯಿ ವೆಚ್ಚದ ಶೇಂಗಾ ಬೀಜ ತಯಾರಿಸುವ ಯಂತ್ರವನ್ನೂ ತಂದಿದ್ದಾರೆ. ಇದರಿಂದಲೂ ಪ್ರತಿನಿತ್ಯ ಆದಾಯವನ್ನು ಗಳಿಸುತ್ತಿದ್ದಾರೆ.

ಮಹಿಳೆಯೋರ್ವಳಿಗೆ ಸರಿಯಾದ ಪ್ರೋತ್ಸಾಹ, ಮಾರ್ಗದರ್ಶನ, ಹಣಕಾಸಿನ ನೆರವು ದೊರೆತರೆ ಅವಳು ಈ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬಲ್ಲಳು ಎಂಬ ಮಾತಿಗೆ ಪ್ರಭಾರವರು ಉತ್ತಮ ಉದಾಹರಣೆ.

Leave a Reply

Your email address will not be published. Required fields are marked *