ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಬೆಳೆದು ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಆಶಯದಂತೆ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕಟಿಬದ್ಧವಾಗಿದೆ. ಈ ಸಂಬoಧ ಯೋಜನೆಯ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಯೋಜನೆಯ ಪಾಲುದಾರರೆಲ್ಲರೂ ಸ್ವಚ್ಛತೆಯ ಬಗ್ಗೆ ಅಭಿಮಾನವುಳ್ಳವರಾಗಿದ್ದಾರೆ. ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ. ಸ್ವಚ್ಛತೆಯ ಪರಿಕಲ್ಪನೆ ಇಲ್ಲಿಂದ ಆರಂಭಗೊoಡರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಪೂಜ್ಯ ಡಾ||ಡಿ. ವೀರೇಂದ್ರ ಹೆಗ್ಗಡೆಯವರು “ಸ್ವಚ್ಛ ಶ್ರದ್ಧಾ ಕೇಂದ್ರ” ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜನ ಸಹಭಾಗಿತ್ವದ ಈ ಕಲ್ಪನೆ ಸಾಮಾನ್ಯರಲ್ಲಿ ಬಹಳಷ್ಟು ಉತ್ಸಾಹವನ್ನು ಮೂಡಿಸಿದೆ. ಕಳೆದ ಆರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ನಾಡಿನಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು 2016 ರಿಂದ ಪ್ರಾರಂಭಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿರುತ್ತದೆ. ಪ್ರಸ್ತುತ ವರ್ಷ 75 ನೇ ಸ್ವಾತಂತ್ರೋತ್ಸವದ ಸಂದರ್ಭ “ನಮ್ಮೂರು ನಮ್ಮ ಶ್ರದ್ಧಾಕೇಂದ್ರ” ಕಾರ್ಯಕ್ರಮದಡಿಯಲ್ಲಿ ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಎಂಬ ದಿಟ್ಟ ನಿಲುವಿನೊಂದಿಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶ ನೀಡಲಾಗಿದೆ.
ಈ ಸಂದೇಶಕ್ಕೆ ಸ್ಪಂದಿಸಿದ ಭಕ್ತಾದಿಗಳು ರಾಜ್ಯಾದ್ಯಂತ ದೇವಸ್ಥಾನ, ಮಂದಿರ, ಬಸದಿ, ಚರ್ಚ್ ಹಾಗೂ ಮಸೀದಿ ಒಳಗೊಂಡoತೆ ಸುಮಾರು ಕ್ಕೂ 15,309 ಕ್ಕೂ ಮಿಕ್ಕಿದ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಚತಾ ಮಹಾ ಅಭಿಯಾನವನ್ನು ಕೈಗೊಂಡು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿರುತ್ತಾರೆ.
ಈ ಶ್ರದ್ಧಾಕೇಂದ್ರಗಳ ಅಭಿಯಾನದಲ್ಲಿ ಶ್ರದ್ಧಾ ಕೇಂದ್ರಗಳ ಆಡಳಿತ ಮಂಡಳಿಗಳು, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಶೌರ್ಯ ವಿಪತ್ತು ನಿರ್ವಹಣೆಯ ಸ್ವಯಂ ಸೇವಕರು, ನವಜೀವನ ಸಮಿತಿ ಸದಸ್ಯರು, ಊರ ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕರ್ತರು ಮುಂತಾದವರು ಕೈ ಜೋಡಿಸಿದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.
ನಡೆದ ಸ್ವಚ್ಚತಾ ಕಾರ್ಯಕ್ರಮಗಳ ವಿವರ :
- ದೇವಸ್ಥಾನದ ಸುತ್ತಮುತ್ತಲಿನ ಗಿಡ ಘಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ.
- ಮಂದಿರ, ಚರ್ಚ್, ಮಸೀದಿಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
- ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸಲಾಗಿದೆ
- ಶ್ರದ್ಧಾಕೇಂದ್ರಗಳ ಪರಿಕರಗಳನ್ನು ಸ್ವಚ್ಛತೆ ಮಾಡಲಾಗಿದೆ.
- ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ನಾನಕಟ್ಟೆ, ನದಿ ತೀರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪ್ಲಾಸ್ಟಿಕ್, ಬಟ್ಟೆಬರೆ ಕಸಗಳನ್ನು ನದಿಗೆ ಎಸೆಯದಂತೆ ಅರಿವು ಮೂಡಿಸಲಾಗಿದೆ.
- ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ.
- ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಚೀಲ ಬಳಕೆ ಮಾಡಲು ಜಾಗೃತಿ ಮೂಡಿಸಲಾಗಿದೆ.
- ಜಾತ್ರೆ, ವಿಶೇಷ ಕರ‍್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಅರಿವು ಮೂಡಿಸಲಾಗಿದೆ.
- ತ್ಯಾಜ್ಯಗಳನ್ನು ಬಿಸಾಡಲು ಬಿದಿರಿನ ಬುಟ್ಟಿ, ಡಸ್ಟ್ಬಿನ್, ತಗಡಿನ ಡಬ್ಬ ಇತ್ಯಾದಿಗಳನ್ನು ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಹಾಕಲಾಗಿದೆ.
ದೇವಸ್ಥಾನ | ಚರ್ಚ್ | ಮಸೀದಿ | ಬಸದಿ | ಇತರೆ | ಒಟ್ಟು |
13,948 | 637 | 257 | 54 | 413 | 15,309 |
- ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಕರ ಒಟ್ಟು ಸಂಖ್ಯೆ: 3,78,820
ಧಾರ್ಮಿಕ ಕೇಂದ್ರಗಳ ಪಾವಿತ್ರö್ಯತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಶ್ರದ್ಧಾಕೇಂದ್ರಗಳ ಶುಚಿತ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ.