ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸಂಘದ ಸದಸ್ಯರಾದ ಸಿದ್ದಪ್ಪ ಸಿದ್ದಲಿಂಗಪ್ಪ ವದ್ದಿ ಹೂವಿನ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುಗಳೇಕಟ್ಟಿ ಗ್ರಾಮದವರಾದ ಇವರು ಗ್ರಾಮಾಬಿವೃದ್ದಿ ಯೋಜನೆ ಹಮ್ಮಿಕೊಂಡಿದ್ದ ಅದ್ಯಯನ ಪ್ರವಾಸಕ್ಕೆ ತೆರಳಿ ಹೂವಿನ ಕೃಷಿಯ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಅರ್ಧ ಎಕರೆಯಲ್ಲಿನ ಹೂವಿನ ಕೃಷಿ ಕೈಗೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಅರ್ಧ ಎಕರೆಯಲ್ಲಿ ಚಂಡು ಹೂವಿನ ಗಿಡ ಬೆಳೆಸಿದ್ದರು. ಸ್ಥಳೀಯವಾಗಿ ಸಗÀಟಾ ಚಂಡು ಹೂವು ಎಂದು ಕರೆಯಲ್ಪಡುವ ಮಾರಿಗೋಲ್ಡ್ ತಳಿಯ ಹೂವಿನ 1500 ಸಸಿಗಳನ್ನು ಗಿಡದಿಂದ ಗಿಡ ಒಂದುವರೆ ಅಡಿ, ಸಾಲಿನಿಂದ ಸಾಲಿಗೆ ಮೂರು ಅಡಿಯಂತೆ ನಾಟಿ ಮಾಡಿದ್ದರು. ಹೊಸದುರ್ಗ ತಾಲೂಕಿನ ನರ್ಸರಿಯಿಂದ ಗಿಡ ಖರೀದಿಸಿ ತಂದಿದ್ದರು. ನಾಟಿ ಪೂರ್ವ ಯತೇಚ್ಚ ಕಾಂಪೋಸ್ಟ ಗೊಬ್ಬರ ಭೂಮಿಗೆ ಸೇರಿಸಿ ಉಳುಮೆ ಮಾಡಿದ್ದರು. ಇಪ್ಪತ್ತು ದಿನದ ಸಸಿಗಳನ್ನು ನಾಟಿಗೆ ಬಳಸಿದ್ದಾರೆ. ನಾಟಿ ಹಚ್ಚಿದ ಇಪ್ಪತ್ತು ದಿನಕ್ಕೆ ಗುಣಿವಾರು ಎರೆಗೊಬ್ಬರ ಉಣಿಸಿದ್ದಾರೆ.ಡ್ರಿಪ್ ಮೂಲಕ ನೀರುಣಿಸಿದ್ದಾರೆ. ಗಿಡ ಹಚ್ಚಿ ನಲವತ್ತೈದು ದಿನಕ್ಕೆ ಕೊಯ್ಲು ಆರಂಭಿಸಿದ್ದರು. 60 ಕ್ವಿಂಟಾಲ್ ಹೂವುಗಳನ್ನು ಪಡೆದಿದ್ದಾರೆ. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಮಾರುಕಟ್ಟೆಗಳು ಹತ್ತಿರವಿರುವುದರಿಂದ ಹೂವುಗಳ ವಿಕೃಯಕ್ಕೆ ಸಮಸ್ಯೆಯಾಗಿಲ್ಲ. ಮಾರುಕಟ್ಟೆಗೆ ಬಿಡಿ ಹೂವುಗಳನ್ನು ಮಾರಾಟ ಮಾಡುವುದಿಲ್ಲ. ಬದಲಿಗೆ ಮಾಲೆಗಳನ್ನು ತಯಾರಿಸಿ ವಿಕೃಯಿಸುತ್ತಾರೆ. ಕೀ.ಗ್ರಾಂ ಬಿಡಿ ಹೂವಿಗೆ 40-50 ರೂಪಾಯಿ ದರ ಸಿಗುತ್ತದೆ. ಶ್ರಾವಣ ಮಾಸದಲ್ಲಿ ಕೆ.ಜಿ ಹೂವಿಗೆ 60-70 ರೂ ದೊರಕಿದೆ. ಮುಂಬರುವ ಗಣೇಶ ಚತೂರ್ಥಿ, ದೀಪಾವಳಿಯ ವೇಳೆಗೆ ಇನ್ನೂ ಹೆಚ್ಚಿನ ದರ ಸಿಗಬಹುದೆನ್ನುವ ಆಶಾಭಾವನೆ ಹೊಂದಿದ್ದಾರೆ.
ಯೋಜನೆ ಏರ್ಪಡಿಸಿದ ಅದ್ಯಯನ ಪ್ರವಾಸದಿಂದಾಗಿ ಹೊಸ ಕೃಷಿ ವಿಧಾನ ಕಲಿಯಲು ಸಾಧ್ಯವಾಯಿತು. ಉತ್ತಮ ಗಳಿಕೆ ಕಂಡುಕೊಳ್ಳಲು ಅನುಕೂಲವಾಯಿತು ಎನ್ನುವ ಅಭಿಪ್ರಾಯ ಸಿದ್ದಪ್ಪ ಅವರದು.
ಬಸವಳಿದ ಕೃಷಿಯ ನಡುವೆ ಆಸರೆಯಾದ ಚಂಡು ಹೂವು
