ಹುಬ್ಬಳ್ಳಿಯ ವಿಜಯ ಬಸವೇಶ್ವರ ನಗರದ ನಿವಾಸಿಯಾದ ಪುಷ್ಪಾ ಶರಣಪ್ಪ ಗೊರವರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೇಡನಾಳ ಗ್ರಾಮದಲ್ಲಿ ನಡೆಸಿದ ಸ್ವ ಉದ್ಯೋಗ ತರಬೇತಿಯಲ್ಲಿ ಭಾಗವಹಿಸಿ ಜೂಲಾ ವಾಯರ್‍ನಿಂದ ಹೆಣೆಯಬಹುದಾದ ವಿವಿಧ ವಿನ್ಯಾಸಗಳ ಗ್ರಹಾಲಂಕಾರ ವಸ್ತುಗಳ ತಯಾರಿ ಬಗ್ಗೆ ಮಾಹಿತಿ ಪಡೆದು ಬಂದರು. ನಂತರ ಈ ಉತ್ಪನ್ನಗಳ ತಯಾರಿಯನ್ನೇ ಸ್ವ ಉದ್ಯೋಗವನ್ನಾಗಿ ಮಾಡಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಹುಬ್ಬಳ್ಳಿ ಮಾರುಕಟ್ಟೆಯಿಂದ ವಿವಿಧ ಬಣ್ಣಗಳ ಕಚ್ಚಾ ಜೂಲಾ ವಾಯರ್‍ನ್ನು ಖರೀದಿಸಿ ಹೆಣಿಕೆ ಮಾಡುತ್ತಾರೆ. ಬಾಗಿಲಿಗೆ ಮೆರುಗು ನೀಡಬಲ್ಲ ವಿವಿಧ ಅಳತೆಯ ಪಟ್ಟಿಗಳು, ಬೇರೆ ಬೇರೆ ಬಣ್ಣಗಳ ಮಿಶ್ರಣದಿಂದ ಸುಂದರ ಕಸೂತಿಗಳನ್ನು ಹೊಂದಿದ ಬಾಗಿಲು ತೋರಣಗಳನ್ನು ತಯಾರಿಸುತ್ತಾರೆ. ತಯಾರಿಸಿದ ತೋರಣಗಳನ್ನು ಹುಬ್ಬಳ್ಳಿ ಹಾಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇವರು ತಾವು ದುಡಿಯುವುದಲ್ಲದೇ ಸುತ್ತಮುತ್ತಲಿನ 35-40 ಮಹಿಳೆಯರು ಇವರಿಂದ ಕಚ್ಚಾ ವಸ್ತುಗಳನ್ನು ಒಯ್ದು ವಿವಿಧ ವಸ್ತುಗಳನ್ನು ತಯಾರಿಸಿಕೊಡುತ್ತಿದ್ದಾರೆ. ಪ್ರತಿ ತಿಂಗಳು 2000-2500 ಬಾಗಿಲ ತೋರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ತಯಾರಿಸಿದ ವಸ್ತುಗಳು ವ್ಯಾಪಾರವಾಗದೇ ಉಳಿದ ಉದಾಹರಣೆಯಿಲ್ಲ ಎನ್ನುವುದು ಇವರ ಅಭಿಪ್ರಾಯ.
ಬಾಗಿಲಿನ ತೋರಣಗಳನ್ನು ತಯಾರಿಸುವುದರಲ್ಲಿ ಯಶಸ್ವಿಯಾದ ಇವರು ಬೇರೆಯದೇ ಆದ ಆಕರ್ಷಣೀಯ ವಸ್ತುಗಳ ತಯಾರಿಕೆಗೆ ಮನಸ್ಸು ಮಾಡಿದರು. ಸುಂದರವಾದ ಕನ್ನಡಿಯ ಅಲಂಕಾರ ವಸ್ತುಗಳು, ಅಲಂಕಾರಿಕ ಬುಟ್ಟಿಗಳನ್ನು, ಹಣ್ಣುಗಳನ್ನು ಇಡಬಲ್ಲ ನೇತಾಡಬಲ್ಲ ಜೂಮರ್‍ಗಳು, ಜೋಕಾಲಿ, ಆಕಾಶ ಬುಟ್ಟಿಯನ್ನು ತಯಾರಿಸತೊಡಗಿದರು. ಇವುಗಳೂ ತಯಾರಿಸಿದಷ್ಟೇ ವೇಗವಾಗಿ ವ್ಯಾಪಾರವಾಗತೊಡಗಿದವು.
ಪ್ರತೀ ತಿಂಗಳೂ 3000-4000 ಕನ್ನಡಿ, 1000 ಜೂಮರ್, 500-800 ಜೋಕಾಲಿಗಳು, 400-500 ಆಕಾಶ ಬುಟ್ಟಿಗಳನ್ನು ತಯಾರಿಸಿ ಮಾರುತ್ತಿದ್ದಾರೆ. ಪ್ರತೀ ಉತ್ಪನ್ನಗಳ ಮೇಲೆ ಐದು ರೂಪಾಯಿ ಉಳಿತಾಯವಾಗುತ್ತದೆ. 20,000-25,000 ರೂಪಾಯಿ ಲಾಭದ ಮೊತ್ತ ಪ್ರತೀ ತಿಂಗಳು ಕೈಗೆ ಸಿಗುತ್ತದೆ ಎನ್ನುತ್ತಾರೆ ಪುಷ್ಪಾ ಗೊರವರ್.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ತರಬೇತಿಯಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪುಷ್ಪಾ ಶರಣಪ್ಪ ಗೊರವರ್. ಈ ಮೊದಲು ಮನೆಯಲ್ಲಿ ಕೆಲಸವಿಲ್ಲದೇ ಖಾಲಿ ಇರುತ್ತಿದ್ದ ಇವರು ಸಂಘದಲ್ಲಿ ಸಾಲದ ವ್ಯವಹಾರ ಮಾಡಿ ಉತ್ತಮ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿರುವುದು ಮಾದರಿಯೆನಿಸುತ್ತದೆ.