ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.
ಸಿರಿಧಾನ್ಯಗಳಲ್ಲಿ ಕೊರಲೆಗೆ ವಿಶೇಷ ಸ್ಥಾನವಿದೆ. ಕೊರಲೆ ಸಿರಿಧಾನ್ಯಗಳ ಸಾಲಿಗೆ ಸೇರಿದ್ದು ತೀರಾ ಇತ್ತೀಚೆಗೆ. ತೃಣಧಾನ್ಯಗಳಲ್ಲಿಯೇ ಅತೀ ಹೆಚ್ಚು ನಾರಿನಂಶ ಹೊಂದಿರುವ ಧಾನ್ಯವಿದು. ದರವೂ ಜಾಸ್ತಿ. ಒಂದೆರಡು ದಶಕಗಳ ಹಿಂದೆ ತುಮಕೂರು, ಚಿತ್ರದುರ್ಗ ಭಾಗಗಳಲ್ಲಿ ಕೊರಲೆ ಸಾಮಾನ್ಯವೆಂಬಂತೆ ಬೆಳೆಯಲಾಗುತ್ತಿತ್ತು. ರೈತರ ಹೊಲದಲ್ಲಿ ಕೊರಲೆ ಸೇರಿದಂತೆ ಇತರೆ ತೃಣಧಾನ್ಯಗಳು ಇರಲೇ ಬೇಕಿತ್ತು. ದಿನನಿತ್ಯ ಅನ್ನದ ಬಟ್ಟಲಲ್ಲಿ ಕೊರಲೆಯ ಅನ್ನ, ಬೆಳಗಿನ ಉಪಾಹಾರಕ್ಕೆ ಕೊರಲೆ ದೋಸೆ ಸಾಮಾನ್ಯವಾಗಿತ್ತು. ನಾನಾ ವೈವಿಧ್ಯ ರೂಪದಲ್ಲಿ ಆಹಾರವಾಗಿ ಕೊರಲೆ ಹಿರಿಯರ ಆಹಾರದ ಭಾಗವಾಗಿ ಬೆರೆತಿತ್ತು. ಹಣ ಮಾಡುವ ಹುಚ್ಚು ರೈತರ ಮನಸ್ಸನ್ನು ಆಕ್ರಮಿಸಿಕೊಂಡಾಗ, ದುಡ್ಡು ಗಳಿಸಿಕೊಡುವ ಬೆಳೆಗೆ ರೈತರು ತಮ್ಮ ಹೊಲದಲ್ಲಿ ರಾಜ ಮರ್ರ್ಯಾದೆ ನೀಡತೊಡಗಿದರು. ಪರಿಣಾಮ ಒಂದು ಹಂತದಲ್ಲಿ ಕೊರಲೆ ಅಳಿಯುವ ಹಂತಕ್ಕೆ ತಲುಪಿತ್ತು. ಆದರೆ ಸಿರಿಧಾನ್ಯಗಳ ಪಟ್ಟಿಯಲ್ಲಿಯೇ ಸ್ಥಾನ ಪಡೆಯದಿದ್ದ ಕೊರಲೆಗೀಗ ರಾಜ ಮರ್ಯಾದೆ ಸಿಗುತ್ತಿದೆ. ತೃಣ ಧಾನ್ಯಗಳಲ್ಲಿಯೇ ಹೆಚ್ಚಿನ ದರ ಗಿಟ್ಟಿಸಿಕೊಳ್ಳುವ ಧಾನ್ಯವಾಗಿಯೂ ಪ್ರಸಿದ್ದಿ ಪಡೆದಿದೆ. ಕೆಲವೇ ವರ್ಷಗಳ ಹಿಂದೆ ಅಪರಿಚಿತವಾಗಿದ್ದ ಕೊರಲೆ ಪ್ರಚಲಿತಕ್ಕೆ ಬರುವಲ್ಲಿ ಹಲವರ ಪ್ರಯತ್ನ ಅಡಗಿದೆ. ಆ ಪ್ರಯತ್ನದಲ್ಲಿ ತೊಡಗಿದ ವ್ಯಕ್ತಿಗಳಲ್ಲಿ ಎಚ್. ಕೆ. ರಘು ಒಬ್ಬರು.
ತುಮಕೂರು ಜಿಲ್ಲೆ ಸಿರಾ ತಾಲೂಕಿನ ಹೆಂದೂರು ಗ್ರಾಮದ ಇವರಿಗೆ ಕೊರಲೆ ಬೆಳೆಯ ಮೇಲೆ ಅದೇನೋ ವಿಶ್ವಾಸ. ತಾವು ಮಾತ್ರ ಬೆಳೆಯುವುದಲ್ಲದೇ ನೂರಾರು ರೈತರಿಗೆ ಬೆಳೆ ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಕಳೆದ ಬಾರಿಯ ಮುಂಗಾರಿನಲ್ಲಿ ಇವರ ಗ್ರಾಮದ ಸುತ್ತಮುತ್ತಲಿನ ಐವತ್ತಕ್ಕೂ ಅಧಿಕ ರೈತರು ರಘು ಇವರ ಮಾರ್ಗದರ್ಶನದಲ್ಲಿ ಕೊರಲೆ ಕೃಷಿ ಮಾಡಿದ್ದರು. ಪರಿಣಾಮ ನೂರಕ್ಕೂ ಅಧಿಕ ಎಕರೆಗಳಲ್ಲಿ ಕೊರಲೆ ಬೆಳೆ ಮೈದಳೆದಿತ್ತು. ಇವರದು ಹದಿನೇಳು ಎಕರೆ ಜಮೀನು. ಸಂಪೂರ್ಣ ಜಮೀನನ್ನು ಸಿರಿಧಾನ್ಯ ಕೃಷಿಗೆ ಮೀಸಲಿಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಸಿರಿಧಾನ್ಯಗಳನ್ನು ಬಿಟ್ಟು ಬೇರೆ ಬೆಳೆ ಬೆಳೆದ ಉದಾಹರಣೆಯಿಲ್ಲ.
ಸಿರಿಧಾನ್ಯ ಕೃಷಿಯಲ್ಲಿ ಬೆಳೆಗಳ ನಡುವೆ ಕಳೆ ಗಿಡಗಳು ಬೆಳೆಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕಳೆಯ ಬೀಜಗಳು ಕೊರಲೆ ಧಾನ್ಯಗಳೊಂದಿಗೆ ಮಿಶ್ರಣಗೊಂಡರೆ ಅದನ್ನು ಬೇರ್ಪಡಿಸುವುದು ಕಷ್ಟ. ಕಳೆ ಬೀಜಗಳು ಬೆರಕೆಯಾದ ಬೀಜಗಳನ್ನು ಬಿತ್ತನೆಗೆ ಬಳಸಿದರೆ ಹೊಲದಲ್ಲಿ ನಿಯಂತ್ರಿಸಲಸಾಧ್ಯವಾದಷ್ಟು ಕಳೆ ಗಿಡಗಳು ಬಾಧಿಸಲೂ ಬಹುದು. ಕ್ರಮೇಣ ಫಸಲಿನಲ್ಲಿ ಬೆರಕೆಯೇ ಜಾಸ್ತಿಯಾಗಿ ಮಾರುಕಟ್ಟೆಯಲ್ಲಿ ತಿರಸ್ಕ್ರತಗೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ.
ಬೀಜ ಬಿತ್ತಿದ ನಾಲ್ಕರಿಂದ ಐದು ದಿನಕ್ಕೆ ಮೊಳಕೆ ಬರುತ್ತದೆ. ಮಣ್ಣಿನಲ್ಲಿರುವ ತೇವವನ್ನೇ ಹೀರಿಕೊಂಡು ಬೆಳೆಯತೊಡಗುತ್ತದೆ. ಒಂದೆರಡು ಮಳೆಯಾದರೂ ಸಾಕು ಕೊರಲೆಯ ಬೆಳವಣಿಗೆ ಸರಾಗ.
ಕೊರಲೆ ಗರಿಗಳು ತೆನೆ ಹಳದಿ ಬಣ್ಣಕ್ಕೆ ತಿರುಗಿದರೆ ಫಸಲು ಮಾಗಿದೆ ಎಂದರ್ಥ. 75-80 ದಿನಕ್ಕೆ ಕೊರಲೆ ಕಟಾವಿಗೆ ಸಿಗುತ್ತದೆ. ಕೊರಲೆಯ ಕಟಾವು ಸಮಯಕ್ಕೆ ಸರಿಯಾಗಿ ಆಗಲೇ ಬೇಕು. ನಿರ್ಲಕ್ಷಿಸಿದಲ್ಲಿ ತೆನೆಗಳು ಗದ್ದೆಯಲ್ಲಿಯೇ ಉದುರಿ ಹೋಗುವ ಭಯವಿದೆ. ಇತರ ಸಿರಿಧಾನ್ಯಗಳಾದ ನವಣೆ, ಸಾಮೆ, ಬರಗು, ಊದಲು ಇವುಗಳಿಗೆ ಕಟಾವಿನ ಸಮಯ ಮಿಕ್ಕಿದರೂ ಚಿಂತಿಸುವ ಅಗತ್ಯವಿಲ್ಲ. ಕಾಳು ಉದುರುವ ಸಾಧ್ಯತೆ ಕಡಿಮೆ. ಆದರೆ ಕೊರಲೆ ಬೆಳೆಯಲ್ಲಿ ಮಾತ್ರ ಜಾಗೃತೆ ಅಗತ್ಯ. ಕೊರಲೆಯ ಗೊನೆಗಳು ಬಹಳ ಮೃದು. ಸಮಯಕ್ಕೆ ಕತ್ತರಿಸದಿದ್ದಲ್ಲಿ ಗದ್ದೆಯಲ್ಲಿಯೇ ಉದುರಿ ಹೋಗುತ್ತದೆ. ಹೊಲದಲ್ಲಿ ಉದುರಿದರೆ ಆರಿಸುವುದು ಅಸಾಧ್ಯ. .
ಎಕರೆಗೆ 6-7 ಕ್ವಿಂಟಾಲ್ ಇಳುವರಿ ಸಿಗುತ್ತದೆ. ನೀರಾವರಿ ಕೃಷಿಯಾದಲ್ಲಿ 10-12 ಕ್ವಿಂಟಾಲ್ ಇಳುವರಿ ಸಿಗುತ್ತದೆ. ಒಂದು ಕ್ವಿಂಟಾಲ್ ಕೊರಲೆ ಕಾಳಿನ ಸಂಸ್ಕರಣೆಯಿಂದ ಐವತ್ತು ಕೆಜಿ ಅಕ್ಕಿ ಸಿಗುತ್ತದೆ. ಐದು ಕೀ.ಗ್ರಾಂ ನುಚ್ಚು ಸಿಗುತ್ತದೆ. ನಲವತ್ತೈದು ಕೆಜಿ ತೌಡು ಸಿಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಕೊರಲೆ ಅಕ್ಕಿಗೆ 160 ರೂಪಾಯಿ ದರವಿದೆ.
ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡುತ್ತಿರುವ ಇಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಿರಿ ಧಾನ್ಯಗಳ ಬಗ್ಗೆ ಆಸಕ್ತರು ಪ್ರಶ್ನಿಸುತ್ತಿರುತ್ತಾರೆ. ಇವರಿಗೆ ಪ್ರಾತ್ಯಕ್ಷಿಕೆ ಮೂಲಕವೇ ಉತ್ತರ ನೀಡಬೇಕೆಂದು ತಮ್ಮ ಹೊಲದಲ್ಲಿ ತಲಾ ಅರ್ಧ ಎಕರೆಯಂತೆ ಸಾಮೆ, ಬರಗು, ಊದಲು, ನವಣೆ, ರಾಗಿ, ಹಾರಕ, ಸಜ್ಜೆ, ಜೋಳ ಬೆಳೆಗಳಿಗೆ ಸ್ಥಳ ಮೀಸಲಿಡುತ್ತಾರೆ. ಪ್ರತೀ ವರ್ಷ ನವಧಾನ್ಯಗಳ ಸಿರಿ ಇವರ ಹೊಲದಲ್ಲಿ ಮೈದಳೆದಿರುತ್ತದೆ. ನೋಡುಗರ ಕಣ್ಣುಗಳಿಗೆ ಮುಧ ನೀಡುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿರಿಧಾನ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸಿರಿಧಾನ್ಯ ಅಡುಗೆ ತಯಾರಿಯಲ್ಲಿಯೂ ತಜ್ಞತೆ ಗಳಿಸಿದ್ದಾರೆ